ISRO: ಚಂದ್ರಯಾನ-3ರ(Chandrayan-3) ಅಭೂತಪೂರ್ವ ಯಶಸ್ಸು ಸಾಧಿಸಿದ ಬಳಿಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮೊನ್ನೆಯಿಂದಲೂ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. 15 ದಿನಗಳ ಹಿಂದೆ ಚಂದ್ರನಲ್ಲಿ ರಾತ್ರಿಯಾದ ಕಾರಣ ನಿದ್ರೆಗೆ ಜಾರಿಸಿದ್ದ ವಿಕ್ರಮ್ ಲ್ಯಾಂಡರ್(Vikram lander) ಮತ್ತು ಪ್ರಗ್ಯಾನ್ ರೋವರ್(Pragyan rover) ಗಳನ್ನು ಎಬ್ಬಿಸುವ ಮಹತ್ಕಾರ್ಯಕ್ಕೆ ಇಸ್ರೋ ಮುಂದಾಗಿದೆ. ಆದರೆ ಈ ನಡುವೆಯೇ ಇಸ್ರೋ(ISRO) ಸಂಸ್ಥೆಗೆ ಭಾರೀ ದೊಡ್ಡ ಆಘಾತ ಒಂದು ಎದುರಾಗಿದೆ.

ಈ ಹಿಂದೆ ಚಂದ್ರಯಾನ ನೌಕೆ ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಅದು 14 ದಿನ ಕೆಲಸ ಮಾಡಬಹುದು ಎಂದು ಹೇಳಿತ್ತು. ಅದರಂತೆ 14 ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸಿದ್ದವು. ಬಳಿಕ 15ನೇ ದಿನ ಚಂದ್ರನಲ್ಲಿ ಕತ್ತಲು ಕವಿದ ಬಳಿಕ ಈ ಉಭಯ ನೌಕೆಗಳನ್ನು ನಿದ್ರೆಗೆ ಜಾರಿಸಲಾಗಿತ್ತು. ಇದೀಗ ಮತ್ತೆ ಚಂದ್ರನಲ್ಲಿ ಮುಂಜಾನೆಯಾಗುತ್ತಿದ್ದು ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ನಿದ್ರೆಗೆ ಜಾರಿರುವ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಗಳನ್ನು ಎಬ್ಬಿಸಲು ಹಗಲು ರಾತ್ರಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ ಇಷ್ಟು ಪ್ರಯತ್ನ ನಡೆಸಿದರೂ ಕೂಡ ಇಸ್ರೋಗೆ ಚಂದ್ರನ ಮೇಲಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿಂದ ಯಾವುದೇ ರೀತಿಯ ಸಿಗ್ನಲ್ ಗಳು ಬಂದಿಲ್ಲ. ಹೀಗಾಗಿ ಚಂದ್ರನಲ್ಲಿ ಕತ್ತಲು ಕಳೆದು ಬೆಳಕು ಹರಿದಾಗ ಮತ್ತೆ ಪ್ರಗ್ಯಾನ್ ಹಾಗೂ ವಿಕ್ರಮ್ ಎಚ್ಚರಗೊಂಡು ತಮ್ಮ ಕಾರ್ಯ ನಿರ್ವಹಿಸಲಿವೆ ಎಂದು ತಿಳಿದ್ದ ಇಸ್ರೋ ವಿಜ್ಞಾನಿಗಳಿಗೆ ಕೊಂಚ ನಿರಾಸೆಯಾಗಿದೆ.
ಹೌದು, ಚಂದ್ರನ ದಕ್ಷಿಣ ಧ್ರುವದ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಅನ್ನು ಎಬ್ಬಿಸುವ ಪ್ರಯತ್ನವನ್ನು ಇಸ್ರೋ ಮಾಡುತ್ತಿದೆ. ಈ ಕ್ಷಣದವರೆಗೂ ವಿಕ್ರಮ್ ಹಾಗೂ ಪ್ರಗ್ಯಾನ್‌ನಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಈ ಕುರಿತು ಇಸ್ರೋ ಸಂಸ್ಥೆಯೇ ಅಧಿಕೃತವಾಗಿ ತಿಳಿಸಿದ್ದು ‘ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅವರನ್ನು ಎಚ್ಚರಿಸಿರುವ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂವಹನವನ್ನು ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗಿದೆ. ಸದ್ಯದ ಮಟ್ಟಿಗೆ ಅವರಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯುತ್ತವೆ’ ಎಂದು ಟ್ವೀಟ್‌ನಲ್ಲಿ ಮಾಡಿದೆ.
ಅಲ್ಲದೆ ‘ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ಸೆಂಟರ್‌ನಿಂದ ಈಗಾಗಲೇ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಗೆ ತನ್ನ ಕಮಾಂಡ್‌ಅನ್ನು ನೀಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಅವರಿಬ್ಬರಿಗೂ ಕಮಾಂಡ್ ತಲುಪಿದೆಯೇ, ಅವರು ಎಚ್ಚರಗೊಂಡ ಸ್ಥಿತಿಯಲ್ಲಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈವರೆಗೂ ಅವರಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕ ಸಾಧಿಸುವ ಎಲ್ಲಾ ಪ್ರಯತ್ನಗಳು ಮುಂದುವರಿಯಲಿದೆ’ ಎಂದು ಸಂಸ್ಥೆಯು ಹೇಳಿದೆ.
ಒಂದು ವೇಳೆ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಸಿಗ್ನಲ್ ಕಳಿಸದೇ ಇದ್ದಲ್ಲಿ, ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಇಲ್ಲಿಗೆ ಕೊನೆಯಾಗಲಿದೆಯಾ ಎಂಬ ಅಳುಕು ಎಲ್ಲಾ ಭಾರತೀಯರಿಗೂ ಕಾಡುತ್ತಿದೆ. ಇದು ಇನ್ನು ಮುಂದೆಯೂ ಯಶಸ್ವಿಯಾಗಲಿ ಎಂದು ಭಾರತೀಯರೆಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ ಈ ಹಿಂದೆಯೇ ಇಸ್ರೋ ಕೂಡ ನಮ್ಮ ಪೂರ್ವ ಯೋಜನೆ ಇದ್ದದ್ದೇ 15 ದಿನಗಳು ಮಾತ್ರ. ಇದಾಗಿಯೂ ಚಂದ್ರನ ಮೇಲಿರುವ ಈ ಎರಡು ನೌಕೆಗಳು ರಾತ್ರಿ ಕಳೆದು ಹಗಲು ಬಂದಾಗ ಕಾರ್ಯ ನಿರ್ವಹಿಸಲು ಶುರು ಮಾಡಬಹುದು. ಒಂದು ವೇಳೆ ಯಾವುದೇ ರೀತಿ ಸಿಗ್ನಲ್ ಬರಲಿಲ್ಲ ಅಂದರೆ ಅಲ್ಲಿಗೆ ಚಂದ್ರಯಾನ-3 ಕೊನೆಯಾಗಲಿದೆ ಎಂದು ಇಸ್ರೋ ಈಗಾಗಲೇ ತಿಳಿಸಿತ್ತು.
ಅಂದಹಾಗೆ ಚಂದ್ರಯಾನ-3 ಅನ್ನು 14 ಜುಲೈ 2023 ರಂದು ಮಧ್ಯಾಹ್ನ 2:35 ಕ್ಕೆ ಉಡಾವಣೆ ಮಾಡಲಾಗಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್ವಿಎಂ3 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಆಗಸ್ಟ್ 23 ರಂದು, ಅದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು. ಆ ಮೂಲಕ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ಅನ್ನು ಇಳಿಸಿದ ಮೊದಲ ದೇಶ ಎನಿಸಿಕೊಂಡಿತು.
ಸದ್ಯ ಭಾರತೀಯರು ಹೆಮ್ಮೆ ಪಟ್ಟ, ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿದ ಈ ಚಂದ್ರಯಾನ-3 ಯ ನೌಕೆಗಳಾದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಗಳು ಇನ್ನು ಮುಂದೆಯೂ ಕಾರ್ಯ ನಿರ್ವಹಿಸಲಿ, ಅವುಗಳು ಮತ್ತೆ ಕಾರ್ಯ ನಿರ್ವಹಿಸುವಂತೆ ಇಸ್ರೋ ಮಾಡುತ್ತಿರುವ ಪ್ರಯತ್ನ ಯಶಸ್ವಿಯಾಗಲಿ. ಅವರೆಲ್ಲರ ಹಿಂದೆ ಪ್ರತಿಯೊಬ್ಬ ಭಾರತೀಯನೂ ಇದ್ದಾರೆ.
https://x.com/isro/status/1705209835783078092?t=8xvmwSKuzwWXOK-i10AMyw&s=08
ಇದನ್ನೂ ಓದಿ: ಕೇರಳ ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ಬಂದಿದೆ ಎಂದು ಅಪಪ್ರಚಾರ ,ಯುವಕನಿಂದ ಬೆಳ್ಳಾರೆ ಠಾಣೆಗೆ ದೂರು
