UP: ಪಾಕಿಸ್ತಾನಿ(Pakistani) ಮಹಿಳೆಯೊಬ್ಬಳು ಸುಳ್ಳು ಹೇಳಿ, ನಕಲಿ ದಾಖಲೆಗಳನ್ನು ಬಳಸಿಕೊಂಡು ಬರೋಬ್ಬರಿ 30 ವರ್ಷಗಳಿಂದಲೂ ಶಿಕ್ಷಣ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡು, ಸಂಬಳ ಪಡೆಯುತ್ತಿದ್ದಂತಹ ಘಟನೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿದೆ.
ಹೌದು, ಒಂದೇ ಒಂದು ಸರ್ಕಾರಿ ಕೆಲಸ ಗಿಟ್ಟಿಸಲು ಇಂದು ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿದಿನ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಆ ಅದೃಷ್ಟ ಕೆಲವರಿಗೆ ಮಾತ್ರ. ಕೇವಲ 1 ಪೋಸ್ಟ್ಗೆ ಸಾವಿರಾರು ಜನರು ಪೈಪೋಟಿ ನಡೆಸುವ ಈ ಕಾಲದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಪಾಕಿಸ್ತಾನದ ಮಹಿಳೆ ಒಬ್ಬಳು ಸುಮಾರು 30 ವರ್ಷಗಳಿಂದಲೂ ಉತ್ತರ ಪ್ರದೇಶದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಾನು ಪಾಕಿಸ್ತಾನದ ಪ್ರಜೆ ಎಂಬ ರಹಸ್ಯವನ್ನು ಇಷ್ಟು ವರ್ಷಗಳ ಕಾಲ ಗೌಪ್ಯವಾಗಿ ಇಟ್ಟಿದ್ದು ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಗಿದೆ. ಸದ್ಯ ಈಕೆಯ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಆರೋಪಿ ಮಹಿಳೆಯನ್ನು ಮಹಿರಾ ಅಖ್ತರ್ ಅಲಿಯಾಸ್ ಫರ್ಝಾನಾ ಎಂದು ಗುರುತಿಸಲಾಗಿದೆ. ಈಕೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಕೆಲಸ ಗಿಟ್ಟಿಸಿಕೊಂಡಿರುವುದು ಆಂತರಿಕ ತನಿಖೆಯಲ್ಲಿ ಕಂಡು ಬಂದ ಬಳಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಜೀಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಫರ್ಝಾನಾ, ಕುಮ್ಹರಿಯಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್ ತಿಳಿಸಿದ್ದಾರೆ. ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4), 336, 338 ಮತ್ತು 340ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪಾಕಿಸ್ತಾನಿ ಪ್ರಜೆಯಾಗಿದ್ದರೂ, ನಕಲಿ ನಿವಾಸ ಪ್ರಮಾಣಪತ್ರವನ್ನು ಬಳಸಿಕೊಂಡು ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಂದಹಾಗೆ ಫರ್ಜಾನಾ 1979 ರಲ್ಲೇ ಪಾಕಿಸ್ತಾನಿ ಪ್ರಜೆಯನ್ನ ಮದುವೆಯಾಗಿ ಪಾಕಿಸ್ತಾನಿ ಪೌರತ್ವವನ್ನೂ ಪಡೆದಿದ್ದಾಳೆ. ವಿಚ್ಛೇದನದ ಬಳಿಕ ಪಾಕಿಸ್ತಾನಿ ಪಾಸ್‌ಪೋರ್ಟ್‌ನಲ್ಲೇ ಭಾರತಕ್ಕೆ ಮರಳಿದ್ದಳು. 1985ರ ಸುಮಾರಿಗೆ ಸ್ಥಳೀಯ ವ್ಯಕ್ತಿಯನ್ನ ಮದ್ವೆಯಾಗಿದ್ದಳು. ಅದೇ ಸಮಯದಲ್ಲಿ ತನ್ನನ್ನು ಭಾರತೀಯ ಪ್ರಜೆ ಅಂತ ಬಿಂಬಿಸಿಕೊಳ್ಳಲು ನಕಲಿ ದಾಖಲೆ ಕೊಟ್ಟು ಶಿಕ್ಷಣ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದಳು ಅನ್ನೋದು ಶಿಕ್ಷಣ ಇಲಾಖೆಯ ಆಂತರಿಕೆ ತನಿಖೆಯಲ್ಲಿ ಗೊತ್ತಾಗಿದೆ. ಅವಳು ಪಾಕಿಸ್ತಾನಿ ರಾಷ್ಟ್ರೀಯತೆ ಬಹಿರಂಗವಾದ ನಂತರ, ಇಲಾಖೆ ಆಕೆಯನ್ನ ಸೇವೆಯಿಂದ ವಜಾಗೊಳಿಸಿದೆ.
