ಪ್ರಸಿದ್ಧ ಶಬರಿಮಲೆ ದೇವಸ್ಥಾನದ ತೀರ್ಥ ಪ್ರಸಾದವನ್ನು ಹ್ಯಾಂಡ್ ಸ್ಯಾನಿಟೈಸರ್ ರೀತಿಯಲ್ಲಿ ಬಳಕೆ ಮಾಡಿರುವ ಸಂಬಂಧ ಕೇರಳದ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿದ್ದ ವೇಳೆ, ಕೇರಳದ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರು ದೇವರಿಗೆ ಮತ್ತು ಹಿಂದೂ ಸಂಪ್ರದಾಯಗಳಿಗೆ ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕರಲ್ಲಿ ಅವರು ಕ್ಷಮೆ ಕೇಳಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ.
ವಾರ್ಷಿಕ ಯಾತ್ರೆಗೆ ಶಬರಿಮಲೆ ದೇಗುಲದ ಭಾಗಿಲ ತೆರೆದ ದಿನ ಸಚಿವ ರಾಧಾಕೃಷ್ಣನ್ ಅಯ್ಯಪ್ಪ ದೇಗುಲಕ್ಕೆ ತೆರಳಿದ್ದರು. ಈ ವೇಳೆ ಅವರು ಪೂಜೆ ವೇಳೆ ದೇವರಿಗೆ ಕೈಮುಗಿದಿರಲಿಲ್ಲ. ಜೊತೆಗೆ ಬಳಿಕ ಅರ್ಚಕರು ತೀರ್ಥ ನೀಡಿದಾಗ ಅದನ್ನು ಸೇವಿಸುವ ಬದಲು ಕೈಗೆ ಒರೆಸಿಕೊಂಡು ಸುಮ್ಮನಾಗಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಸಚಿವರ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ನಾನು ದಿನವೂ ನನ್ನ ತಾಯಿಗೆ ಕೈ ಮುಗಿಯುವುದಿಲ್ಲ ಎಂದ ಮಾತ್ರಕ್ಕೆ ನನಗೆ ನನ್ನ ತಾಯಿಯ ಮೇಲೆ ಗೌರವವಿಲ್ಲ ಎಂದರ್ಥವಲ್ಲ. ನಾನು ಕೆಲವೊಂದು ಪದಾರ್ಥಗಳನ್ನು ಸೇವಿಸುವುದಿಲ್ಲ. ಭಕ್ತಿಯ ಹೆಸರಿನಲ್ಲಿ ಯಾರೇ ಒತ್ತಾಯಿಸಿದರೂ ನಾನು ಅದನ್ನು (ತೀರ್ಥ) ಸೇವಿಸುವುದಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
