Piyush Goyal: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ದಕ್ಷಿಣ ಭಾರತೀಯರ ಕುರಿತು ಇದೀಗ ನಾಲಿಗೆ ಹರಿಬಿಟ್ಟಿದ್ದು “ದಕ್ಷಿಣ ಭಾರತೀಯರು ಸದಾ ಕಿತ್ತಾಡುತ್ತಾರೆ. ಅವರಷ್ಟು ಕೇಳು ಮಟ್ಟದ ಚಿಂತನೆ ಮತ್ತೊಂದು ಇಲ್ಲ” ಎಂದು ಹೇಳುವುದರ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸಮರ್ಪಕ ತೆರಿಗೆ ಹಣ ನೀಡುತ್ತಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರವು ವಿರೋಧ ವ್ಯಕ್ತಪಡಿಸಿತ್ತು. ಇದು ಕೇವಲ ಸರ್ಕಾರದ ಅಭಿಯಾನ ಆಗಿರದೆ ಕನ್ನಡಿಗರು ಸಹ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಿದ್ದರು. ಕರ್ನಾಟಕದಲ್ಲಿ ಪ್ರಾರಂಭವಾದ ಈ ಅಭಿಯಾನವು ಇಡೀ ದಕ್ಷಿಣ ಭಾರತಕ್ಕೆ ವ್ಯಾಪಿಸಿತ್ತು. ಸಮಾರಂಭ ಒಂದರಲ್ಲಿ ಈ ವಿಚಾರವನ್ನು ಉಲ್ಲೇಖಿಸಿ ಮಾತನಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ದಕ್ಷಿಣ ಭಾರತದ ರಾಜ್ಯಗಳನ್ನು ಉಲ್ಲೇಖಿಸಿ, ಕೀಳು ಮಟ್ಟದ ಚಿಂತನೆ ಹೇಳಿದ್ದಾರೆ.
ಪಿಯೂಷ್ ಗೋಯಲ್ ಹೇಳಿದ್ದೇನು ?
ಸಮಾರಂಭವೊಂದರಲ್ಲಿ ಮಾತನಾಡುವಾಗ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ಸೇರಿ ಕೆಲವು ರಾಜ್ಯಗಳು ಅವರವರಲ್ಲೇ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಈ ರಾಜ್ಯಗಳು ನಾವು ಎಷ್ಟು ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿದ್ದೇವೆ ಅಷ್ಟು ನಮಗೆ ವಾಪಸ್ ಕೊಡಿ ಎಂದು ಕೇಳುತ್ತಿವೆ. ನಾನು ಅರ್ಥಮಾಡಿಕೊಂಡಿರುವಂತೆ ಇದಕ್ಕಿಂತ ಚೋಟಿ ಸೋಚ್ (Choti Soch – ಕೀಳು ಮಟ್ಟದ ಅಥವಾ ಕಡಿಮೆ ಚಿಂತನೆ) ಕೀಳು ಮಟ್ಟದ ಚಿಂತನೆ ಮತ್ತೊಂದಿಲ್ಲ. ಇದಕ್ಕಿಂತಲೂ ದೌರ್ಭಗ್ಯವಾದ ವಿಷಯ ಮತ್ತೊಂದಿಲ್ಲ ಎಂದೂ ಅವರು ಹೇಳಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪಿಯೂಷ್ ಗೋಯಲ್ ಅವರ ವಿಡಿಯೋ ವೈರಲ್ ಆಗುತ್ತಿದೆ.
