Supreme court: ಅನುಕಂಪದ ಹುದ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ನೀಡಿದೆ. ಮೃತ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ನೇಮಕವಾದ ಬಳಿಕ ಅವರ ಬೇಡಿಕೆ ಈಡೇರಿದಂತೆ. ನಂತರ ಅದನ್ನೇ ಪುನಃ ಚಲಾಯಿಸಿ ಉನ್ನತ ಹುದ್ದೆಗೆ ಬೇಡಿಕೆ ಇಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಅನುಕಂಪದ ಆಧಾರದ ಮೇಲೆ ಸ್ವೀಪರ್ ಕೆಲಸಕ್ಕೆ ನೇಮಕಗೊಂಡಿದ್ದ ತಮಿಳುನಾಡಿನ ಎಂ. ಜಯಬಾಲ ಮತ್ತು ಎಸ್. ವೀರಮಣಿ ಅವರು ತಮ್ಮನ್ನು ಕಿರಿಯ ಸಹಾಯಕ ಹುದ್ದೆಗೆ ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಆ ಮೂಲಕ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ಪೀಠ ಬದಿಗೆ ಸರಿಸಿತು.
ಒಂದು ವೇಳೆ ಅರ್ಜಿಗೆ ತಡೆ ನೀಡದೆ ಹೋದರೆ ಅಂತ್ಯವಿಲ್ಲದ ಅನುಕಂಪ ಆಧಾರಿತ ನೇಮಕಾತಿಗೆ ಅನುಮತಿ ನೀಡಿದಂತಾಗುತ್ತದೆ ಎಂದು ಅದು ಹೇಳಿತು.”ಮೃತ ಉದ್ಯೋಗಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿದ ನಂತರ, ಅವರ ಹಕ್ಕು ಚಲಾವಣೆಗೆ ಬಂದಂತೆ. ನಂತರ, ಉನ್ನತ ಹುದ್ದೆಗೆ ನೇಮಕಾತಿ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲದಿದ್ದರೆ, ಅದು ‘ಅಂತ್ಯವಿಲ್ಲದ ಅನುಕಂಪದ ಆಧಾರದ ನೇಮಕಾತಿ ಪ್ರಕರಣವಾಗುತ್ತದೆ ” ಎಂದು ನ್ಯಾಯಾಲಯ ಹೇಳಿದೆ.
ಅನುಕಂಪದ ಆಧಾರದಲ್ಲಿ ನೇಮಕವಾದ ಅರ್ಜಿದಾರರು ಉನ್ನತ ಹುದ್ದೆಗೆ ಅರ್ಹರಾಗಿದ್ದರೂ ಅದು ಆ ಹುದ್ದೆಯಲ್ಲಿ ನೇಮಕಗೊಳ್ಳುವ ಹಕ್ಕು ಅವರಿಗೆ ಇದೆ ಎಂದರ್ಥವಲ್ಲ ಎಂಬುವುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಮೃತರ ಹೆಸರಿನಲ್ಲಿ ಅವರ ಅವಲಂಬಿತರು ಹುದ್ದೆ ಪಡೆದ ಬಳಿಕ ಬೇಡಿಕೆ ಈಡೇರಿದಂತೆ. ಅವರು ಉನ್ನತ ಹುದ್ದೆಗೆ ಬಡ್ತಿ ನೀಡಬೇಕು ಎಂದು ಕೇಳಲು ಬರುವುದಿಲ್ಲ. ಹೀಗೆ ನೀಡುತ್ತಾ ಹೋದರೆ, ಅನುಕಂಪಕ್ಕೆ ಅಂತ್ಯವೇ ಇಲ್ಲದಂತಾಗುತ್ತದೆ. ಅನುಕಂಪದ ಮೇಲೆ ಪಡೆದ ಸೌಲಭ್ಯವನ್ನು ಉನ್ನತೀಕರಿಸಿಲು ಸಾಧ್ಯವಿಲ್ಲ ಎಂದು ಪೀಠವು ಕಟ್ಟುನಿಟ್ಟಾಗಿ ಹೇಳಿದೆ.ಒಮ್ಮೆ ಅಂತಹ ನೇಮಕಾತಿ ಅಂಗೀಕಾರವಾದರೆ, ಅನುಕಂಪ ಆಧಾರದಲ್ಲಿ ನೇಮಕಾತಿಯ ಉದ್ದೇಶ ಈಡೇರುತ್ತದೆ. ಆ ಹಕ್ಕನ್ನು ಪದೇ ಪದೇ ಚಲಾಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರತಿವಾದಿಗಳು ಉನ್ನತ ಹುದ್ದೆಗೆ ಮೊದಲೇ ಅರ್ಜಿ ಸಲ್ಲಿಸಬಹುದಿತ್ತು ಎಂಬ ಅರಿವು ಇರಲಿಲ್ಲ ಎಂಬ ತಿರಸ್ಕರಿಸಿದ ನ್ಯಾಯಾಲಯ ಕಾನೂನಿನ ಅರಿವಿಲ್ಲ ಎಂಬುದು ನೆಪವಾಗಕೂಡದು ಎಂದು ಸ್ಪಷ್ಟಪಡಿಸಿತು. ಆ ಮೂಲಕ ತಮಿಳುನಾಡು ಸರ್ಕಾರದ ಮೇಲ್ಮನವಿ ಪುರಸ್ಕರಿಸಿದ ಅದು ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು.
