ಮಂಗಳೂರು-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕೈಕಂಬ ಕೊಯಿಲ ಬಳಿಯಲ್ಲಿ ಬೈಕ್ ಒಂದು ಅಪಘಾತಕ್ಕೀಡಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೂಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಕೂಟಿ ಸವಾರನೊರ್ವ ಕೈಕಂಬ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಕಾರೊಂದರ ಎದುರಿನಲ್ಲೇ ಬಿದ್ದಿದ್ದು, ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ಕೆರೆನಾಡು ನಿವಾಸಿ ಪ್ರವೀಣ್(36) ಎಂದು ಗುರುತಿಸಲಾಗಿದೆ.
ಇದೇ ಸ್ಥಳದಲ್ಲಿ ಕಳೆದ ಮೂರು ದಿನಗಳ ಹಿಂದೆ ಬೈಕ್ ಒಂದು ಅಪಘಾತಕ್ಕೀಡಾಗಿ ಬೈಕ್ ಸವಾರ ಕಡಬ ನಿವಾಸಿ ಯುವಕನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಆ ಘಟನೆ ಮಾಸುವ ಮುನ್ನವೇ ಇನ್ನೊಂದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ನೆನಪಿಸಿಕೊಂಡಿದ್ದಾರೆ.
