ರಾಜ್ಯದಲ್ಲಿ ಧರ್ಮ ದಂಗಲ್ ಗೆ ನಾಂದಿ ಹಾಡಿದ್ದೇ ಉಡುಪಿ ಜಿಲ್ಲೆ. ಧರ್ಮ ದಂಗಲ್ ಗೆ ಕಾರಣವಾದ ಉಡುಪಿಯ ಸರಕಾರಿ ಮಹಿಳಾ ಪಿಯು ಕಾಲೇಜು ಇದೀಗ ಮತ್ತೆ ಸುದ್ದಿಯಲ್ಲಿದೆ. ಅದು ಹಿಜಾಬ್ ವಿವಾದದಿಂದ ಅಲ್ಲ, ಬದಲಾಗಿ ಹೊಸ ಪ್ರವೇಶಾತಿಯ ವಿಷಯದಲ್ಲಿ .
ಹೌದು.ಹಿಜಾಬ್ ವಿಚಾರದಲ್ಲಿ ಕಾಲೇಜಿಗೆ ಸಡ್ಡು ಹೊಡೆದು ಆರು ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು ಹಾಜರಾಗಿದ್ದರು. ಆದರೆ ಉಡುಪಿಯ 40ಕ್ಕಿಂತ ಹೆಚ್ಚು ಅದೇ ಧರ್ಮದ ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ಮೂಲಕ ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಜನವರಿ ತಿಂಗಳಲ್ಲಿ ಹಿಜಾಬ್ ಹಕ್ಕಿನ ಹೋರಾಟ ಉಡುಪಿಯಲ್ಲಿ ಆರಂಭವಾಗಿತ್ತು. ವ್ಯಾಪಾರ ಅಸಹಕಾರ, ಹಲಾಲ್ ಜಟ್ಕಾ, ಮಸೀದಿ ಮಂದಿರ ಹೀಗೆ ತಿಕ್ಕಾಟ ಮುಂದುವರೆದಿದೆ. ಎರಡು ಧರ್ಮಗಳ ಬಿರುಕಿಗೆ ಕಾರಣವಾದ ಕಾಲೇಜಿಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪ್ರಥಮ ಪಿಯುಸಿಗೆ ಹೊಸ ಅಡ್ಮಿಷನ್ 250 ವಿದ್ಯಾರ್ಥಿನಿಯರನ್ನು ಅಡ್ಮಿಷನ್ ಮಾಡುವ ಅವಕಾಶ ಇದೆ. ಆದರೆ ಈಗಾಗಲೇ 335 ಮಕ್ಕಳ ಪ್ರವೇಶ ಪ್ರಕ್ರಿಯೆ ಆಗಿದೆ. ವಿಶೇಷ ಏನೆಂದರೆ ಎರಡು ಸೆಕ್ಷನ್ ಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದೆ.
ಸುಮಾರು ಮೂರು ತಿಂಗಳುಗಳ ಕಾಲ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಪ್ರಾಧ್ಯಾಪಕರು ಭಾರೀ ಸವಾಲುಗಳನ್ನು ಎದುರಿಸಿದ್ದರು. ಪ್ರತಿನಿತ್ಯ ನಡೆಯುತ್ತಿದ್ದ ಪ್ರತಿಭಟನೆಗಳು, ಸಭೆಗಳು, ಮಾಧ್ಯಮಗಳ ನಿರಂತರ ವರದಿ, ರಾಜಕೀಯ ಕೆಸರೆರಚಾಟಗಳು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಕಾರಣವಾಗಿತ್ತು. ಈ ಎಲ್ಲವನ್ನು ಹೊರತುಪಡಿಸಿ ಅದೇ ಕ್ಯಾಂಪಸ್ ನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಗಾಯತ್ರಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸಾಲಿನಲ್ಲಿ ನಿಂತಿದ್ದಾಳೆ. ಪರೀಕ್ಷೆಯಲ್ಲಿ ಶೇ. 85 ಜಾಸ್ತಿ ಅಂಕಪಡೆದ 50 ವಿದ್ಯಾರ್ಥಿನಿಯರನ್ನು ಕಾಲೇಜಿನಲ್ಲಿ ಸನ್ಮಾನಿಸಲಾಗಿತ್ತು.
ದ್ವಿತೀಯ ಪಿಯುಸಿ ಮುಗಿಸಿ 253 ವಿದ್ಯಾರ್ಥಿಗಳು ತೆರಳಿದ್ದರೆ, ಪ್ರಥಮ ಪಿಯುಸಿಗೆ ಇಲ್ಲಿಯವರರೆಗೆ 335 ಮಂದಿ ಅಡ್ಮಿಷನ್ ಆಗಿದ್ದಾರೆ. ಇನ್ನೂ 100 ಅರ್ಜಿಗಳು ಹೋಗಿದ್ದು, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಹತ್ತನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆಯ ನಂತರ ಮತ್ತಷ್ಟು ಅಡ್ಮಿಷನ್ ಆಗುವ ಸಾಧ್ಯತೆಯಿದೆ ಎಂದು ಸಿಡಿಸಿ ಅಧ್ಯಕ್ಷ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಹಿಜಾಬ್ ಹೋರಾಟದ ನಂತರ ಸರಕಾರಿ ಮಹಿಳಾ ಪಿಯು ಕಾಲೇಜಿಗೆ ಮುಸಲ್ಮಾನ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಚರ್ಚೆಗಳು ನಡೆಯುತ್ತಿತ್ತು. ಫಸ್ಟ್ ಪಿಯು ಗೆ ಈಗಾಗಲೇ 40 ಮುಸ್ಲಿಂ ವಿದ್ಯಾರ್ಥಿನಿಯರು ಸೇರ್ಪಡೆಯಾಗಿದ್ದಾರೆ. ಹಿಜಾಬ್ ತೆಗೆದೇ ಕ್ಲಾಸಿಗೆ ಬರಲು ಒಪ್ಪಿದ್ದಾರೆ. ವಿಜ್ಞಾನದ ಎರಡು ಮತ್ತು ಕಾಮರ್ಸ್ ನ ಒಂದು ವಿಭಾಗ ಹೆಚ್ಚಳವಾಗಿದೆ. ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ಜೀವ ಶಾಸ್ತ್ರ ಲ್ಯಾಬ್ ಹೊಸತಾಗಿ ಆರಂಭಿಸಲಾಗಿದೆ.
ಕರಾವಳಿಯಲ್ಲಿ ಇನ್ನೂ ಕೂಡ ಹಿಜಾಬ್ ವಿವಾದ ನಡೆಯುತ್ತಿದ್ದರೂ ಕೂಡ ಇಲ್ಲಿನ ವಿದ್ಯಾರ್ಥಿನಿಯರು ಮಾತ್ರ ನಮಗೆ ಶಿಕ್ಷಣ ಮುಖ್ಯ ಎಂದು ಕಾಲೇಜಿನತ್ತ ಹೆಜ್ಜೆ ಹಾಕುತ್ತಿರುವುದು ಮಾತ್ರ ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು.
