Bengaluru:ತಾನು ವಾಸ ಮಾಡಿಕೊಂಡಿದ್ದ ಅಪಾರ್ಟ್‌ಮೆಂಟ್ ಮಾಲಿಕೆಯ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಕೇರಳ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬೆಂಗಳೂರು(Bengaluru)
ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಕೇರಳ ಮೂಲದ ವರ್ಗೀಸ್ (43) ಎಂದು ತಿಳಿಸಿದ್ದಾರೆ.
ವರ್ಗೀಸ್ ವರ್ಷದ ಹಿಂದೆ ಕೇರಳದಿಂದ ಬೆಂಗಳೂರಿಗೆ ಬಂದಿದು, ಗ್ರೀನ್ ಅವಿನ್ಯೂ ಅಪಾರ್ಟ್‌ಮೆಂಟ್‌ನ ಮಹಿಳೆಯೊಬ್ಬರ ಬಳಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡು, ಅದೇ ಅಪಾರ್ಟ್‌ಮೆಂಟ್‌ನ ಟೆರಾಸ್ ಮೇಲಿರುವ ಕೋಣೆಯಲ್ಲಿ ವಾಸವಾಗಿದ್ದರು.
ಈ ನಡುವೆ ಕೆಲ ದಿನಗಳ ಹಿಂದೆ ಮನೆ ಮಾಲಕಿಯ ಮನೆಯಲ್ಲಿ 250 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ವರ್ಗೀಸ್ ಮತ್ತು ಮತ್ತೊಬ್ಬ ಕೆಲಸದಾಕೆ ಕಳವು ಮಾಡಿದ್ದಾರೆ ಆರೋಪಿಸಿ ಎಂದು ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವರ್ಗೀಸ್‌ನನ್ನು ಕರೆಸಿ ವಿಚಾರಣೆ ನಡೆಸಿದ್ದರು.
ಇದರಿಂದಾಗಿ ತೀವ್ರ ನೊಂದುಕೊಂಡಿದ್ದ ವರ್ಗೀಸ್, ಟೆರಾಸ್‌ನಲ್ಲಿರುವ ತನ್ನ ಕೋಣೆಯ ಶೌಚಾಲಯದ ಕಿಟಕಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆತನ ಬಳಿ ಮಲೆಯಾಳಂ ಭಾಷೆಯಲ್ಲಿ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.
ಡೆತ್‌ನೋಟ್‌ನಲ್ಲಿ “ಈ ಹಿಂದೆ ತನ್ನ ವಿರುದ್ಧ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ಮಾಲೀಕರು ದೂರು ನೀಡಿದ್ದರು. ಆದರೆ, ನಾನು ಯಾವುದೇ ಕಳವು ಮಾಡಿಲ್ಲ. ಅದರಿಂದ ಪೊಲೀಸ್ ವಿಚಾರಣೆಗೆ ಒಳಗಾಗಿದ್ದೇನೆ. “ನನ್ನ ಸಾವಿಗೆ ಮನೆ ಮಾಲೀಕರೇ ಕಾರಣ’ ಎಂದು ಬರೆಯಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಇಲಾಖೆಯ ಕಣ್ತಪ್ಪಿಸಿ ನಡೆಯುತ್ತಿದೆ ವನ್ಯಜೀವಿಗಳ ಬೇಟೆ : ಕಡವೆ ಬೇಟೆಯಾಡಿದ ಮೂವರು ಲಾಕ್ ,ಓರ್ವ ಎಸ್ಕೇಪ್
