Home » ಮುಸ್ಲಿಂ ಯುವತಿಯೊಂದಿಗೆ ದಲಿತ ಯುವಕನ ಪ್ರೀತಿ, ಜನನಿಬಿಡ ರಸ್ತೆಯಲ್ಲೇ ಕೊಚ್ಚಿ ಕೊಂದ ದುಷ್ಕರ್ಮಿಗಳು!

ಮುಸ್ಲಿಂ ಯುವತಿಯೊಂದಿಗೆ ದಲಿತ ಯುವಕನ ಪ್ರೀತಿ, ಜನನಿಬಿಡ ರಸ್ತೆಯಲ್ಲೇ ಕೊಚ್ಚಿ ಕೊಂದ ದುಷ್ಕರ್ಮಿಗಳು!

1 comment

ದಲಿತ ಯುವಕನೋರ್ವ ಮುಸ್ಲಿಂ ಯುವತಿಯ ಜೊತೆ ಎರಡು ವರ್ಷದಿಂದ ಲವ್. ಇಬ್ಬರ ನಡುವೆ ವಾಟ್ಸಪ್ ಚಾಟಿಂಗ್, ತಡರಾತ್ರಿವರೆಗೂ ಕಾಲಿಂಗ್, ಕದ್ದು ಮುಚ್ಚಿ ಭೇಟಿ ನಡೆಯುತ್ತಿದ್ದವು ಎನ್ನಲಾಗಿದೆ. ಆದರೆ ಯುವತಿ ಮನೆಯವರ ವಿರೋಧದಿಂದ ಯುವಕನ ಹತ್ಯೆಯಾಗಿದೆ.

ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕಾಗಿ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದ ಅಂಬೇಡ್ಕರ ಸರ್ಕಲ್ ಬಳಿ ಕಳೆದ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಾಡಿ ಪಟ್ಟಣದ ವಿಜಯ ಕಾಂಬಳೆ(25) ಎಂಬ ಯುವಕನೇ ಕೊಲೆಯಾದ ದುರ್ದೈವಿ.

ಈ ವಿಚಾರವಾಗಿ ಪ್ರೀತಿಸಿದ ಯುವತಿಯ ಕಡೆಯವರು ವಿಜಯ ಕಾಂಬಳೆ ಜೊತೆ ಎಂಟು ತಿಂಗಳ ಹಿಂದೆಯೂ ಜಗಳ ಮಾಡಿ, ವಾರ್ನ್ ಕೊಟ್ಟಿದ್ದರು ಎನ್ನಲಾಗಿದೆ.

ಯುವತಿಯ ಮನೆಯವರ ಬೆದರಿಕೆಯ ನಡುವೆಯೂ ದಲಿತ ಯುವಕ ವಿಜಯ ಮತ್ತು ಮುಸ್ಲಿಂ ಯುವತಿಯ ನಡುವೆ ಪ್ರೀತಿ ಪ್ರೇಮ ಮುಂದುವರೆದಿತ್ತು. ಯುವತಿಯ ಹಿನ್ನಲೆ ಗಮನಿಸದ ವಿಜಯನ ತಾಯಿ, ತಾಳಿ ಕಟ್ಟಿ ಬಿಡು ಎಂದು ಮಗನಿಗೆ ಒಮ್ಮೆ ಹೇಳಿ ಬಿಟ್ಟಿದ್ದಳು. ಇದನ್ನು ತಿಳಿದ ಯುವತಿಯ ಅಣ್ಣ ಶಾಬುದ್ದಿನ್ ಇನ್ನಷ್ಟು ಕೆರಳಿದ್ದಾನೆ ಎನ್ನಲಾಗಿದೆ.

ನಿನ್ನೆ ನಾಳೆಗಾಗಿ ತರಕಾರಿ ತರುವುದಾಗಿ ತಾಯಿಗೆ ಹೇಳಿ ವಿಜಯ್ ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಯಿಂದ ಹೊರಬಿದ್ದಿದ್ದ. ಎಂದಿನಂತೆ ತನ್ನ ಸ್ನೇಹಿತನ ಜೊತೆ ಜನನಿಬಿಡ ಪ್ರದೇಶ ಅಂಬೇಡ್ಕರ್ ಸರ್ಕಲ್ ಬಳಿ ಮಾತನಾಡುತ್ತ ಕುಳಿತಿದ್ದ ವಿಜಯ್ ಮೇಲೆ ಇಬ್ಬರು ಏಕಾ ಏಕಿ ದಾಳಿ ಮಾಡಿದರು. ಮೊದಲು ಬೆತ್ತದಿಂದ ವಿಜಯನ ತಲೆಗೆ ಏಟು ಕೊಟ್ಟರು. ಆಗ ಜೊತೆಯಲ್ಲಿಯೇ ಇದ್ದ ವಿಜಯನ ಸ್ನೇಹಿತ ರಾಘವೇಂದ್ರ ಆತನ ನೆರವಿಗೆ ಮುಂದಾದ. ಬೆತ್ತದಿಂದ ಹೊಡೆಯುತ್ತಿದ್ದ ವ್ಯಕ್ತಿಯನ್ನು ತಡೆಯಲು ರಾಘವೇಂದ್ರ ಯತ್ನಿಸುತ್ತಿದ್ದ ಹೊತ್ತಲ್ಲೇ, ಇತ್ತ ಇನ್ನೊಬ್ಬ ಹಂತಕ, ನೆಲಕ್ಕೆ ಬಿದ್ದ ವಿಜಯನ ಕತ್ತಿಗೆ ಚಾಕು ಹಾಕಿದ್ದಾನೆ. ಅಷ್ಟೇ ಅಲ್ಲ ಎದೆ, ಹೊಟ್ಟೆಗೆ ಚಾಕು ಹಾಕಿ ಪರಾರಿಯಾಗಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಸ್ನೇಹಿತನ ಕಣ್ಣೆದುರೇ ವಿಜಯ ಕಾಂಬಳೇ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಪ್ರತ್ಯಕ್ಷದರ್ಶಿ ರಾಘವೇಂದ್ರ ಹೇಳುವ ಪ್ರಕಾರ ಈ ಕೊಲೆಗೆ ಹಂತಕರು ತೆಗೆದುಕೊಂಡಿರುವ ಸಮಯ ಕೇವಲ ಎರಡೇ ಎರಡು ನಿಮಿಷ. ಹಂತಕರು ತಮ್ಮ ಕೆಲಸ ಮುಗಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಕೊಲೆಯಾದ ವಿಜಯನ ತಾಯಿ ರಾಜೇಶ್ವರಿ ವಾಡಿ ಠಾಣೆಗೆ ದೂರು ನೀಡಿದ್ದಾಳೆ. ಮುಸ್ಲಿಂ ಯುವತಿಯನ್ನು ನನ್ನ ಮಗ ಪ್ರೀತಿಸುತ್ತಿದ್ದು ಇದೇ ಕಾರಣಕ್ಕಾಗಿ ಆಕೆಯ ಕುಟುಂಬದವರು ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಜಯನನ್ನು ಪ್ರೀತಿಸುತ್ತಿದ್ದ ಯುವತಿಯ ಸಹೋದರ, ಕೊಲೆ ಆರೋಪಿ ಶಾಬುದ್ದಿನ್ ಹಾಗೂ ಆತನ ಸ್ನೇಹಿತ ಪರಾರಿಯಾಗಿದ್ದು ಹಂತಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

You may also like

Leave a Comment