Nice Road land: ಬೆಂಗಳೂರು-ಮೈಸೂರು ನಂದಿ ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ (ನೈಸ್ ರಸ್ತೆ ನಿರ್ಮಾಣ) 17 ವರ್ಷಗಳ ಹಿಂದೆ ಬೆಂಗಳೂರು ದಕ್ಷಿಣದ ತಲಗಟ್ಟಪುರದಲ್ಲಿ ಒಂದು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಅಧಿಸೂಚನೆಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಈ ಸಂಬಂಧ ಬೆಂಗಳೂರಿನ ಯಲಚೇನಹಳ್ಳಿಯ ರತ್ನಾ ರೆಡ್ಡಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.ಅಲ್ಲದೆ, ಜಮೀನು ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯಾಗಿ 17 ವರ್ಷಗಳಾದರೂ ಪರಿಹಾರ ನೀಡಿಲ್ಲ. ಪ್ರತಿವಾದಿಗಳು ಇದಕ್ಕೆ ಯಾವುದೇ ಸೂಕ್ತ ವಿವರಣೆ ನೀಡಿಲ್ಲ. ಇಂತಹ ಅಸಾಧಾರಣ ಸುಪ್ತತೆಯು ಕಾನೂನನ್ನು ವಿಫಲಗೊಳಿಸುವುದರ ಜೊತೆಗೆ ಸ್ವಾಧೀನವನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಪೀಠ ಆದೇಶಿಸಿದ್ದು, ಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಿದೆ.ಅಲ್ಲದೆ, ಭೂ ಮಾಲೀಕರಿಗೆ ಅತ್ತ ಪರಿಹಾರ ಪಾವತಿ ಮಾಡದೆ, ಇತ್ತ ಭೂ ಸ್ವಾಧೀನವನ್ನು ಪಡೆದುಕೊಳ್ಳದೆ ವಿಳಂಬ ಮಾಡಿದ್ದ ಕೆಐಎಡಿಬಿ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಯೋಜನೆಯ ಜಾರಿಯಲ್ಲಿ ತೀವ್ರ ವಿಳಂಬವಾಗಿದೆ ಮತ್ತು ಪರಿಹಾರ ನೀಡದೇ ಇರುವ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ, ಮೇಲ್ನೋಟಕ್ಕೆ ಯೋಜನೆಯಲ್ಲಿ ಸಾರ್ವಜನಿಕ ಉದ್ದೇಶವಿರುವಂತೆ ಕಂಡುಬರುತ್ತಿಲ್ಲ ಎಂದು ಹೇಳಿದೆ.ಸುಮಾರು 17 ವರ್ಷಗಳಿಗೂ ಅಧಿಕ ಕಾಲ ಯಾವುದೇ ಸ್ವಾಧೀನ ಪರಿಹಾರ ನೀಡಿಲ್ಲ ಮತ್ತು ವಿಳಂಬವಾಗಿರುವುದಕ್ಕೆ ಅಧಿಕಾರಿಗಳು ತೃಪ್ತಿದಾಯಕ ವಿವರಣೆಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ.
ಹಾಗಾಗಿ, ಅಂತಹ ದೀರ್ಘಕಾಲದ ವಿಳಂಬವು ಸ್ವಾಧೀನದ ಸಿಂಧುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ತಿಳಿಸಿದೆ.ಜೊತೆಗೆ, ಯೋಜನಾ ಪ್ರಾಧಿಕಾರದ ಅನುಮೋದನೆ, ಸಾರ್ವಜನಿಕ ಉದ್ದೇಶದ ಅನುಪಸ್ಥಿತಿ ಮತ್ತು ಅರ್ಜಿದಾರರು ಭೂಮಿಯನ್ನು ನಿರಂತರವಾಗಿ ಸ್ವಾಧೀನ ಹೊಂದಿರುವುದನ್ನು ಪರಿಗಣಿಸಿ ನ್ಯಾಯಪೀಠವು, ಭೂ ಸ್ವಾಧೀನ ಅಧಿಸೂಚನೆಗಳನ್ನು ರದ್ದುಗೊಳಿಸಿಸುತ್ತಿರುವುದಾಗಿ ತಿಳಿಸಿತು.
