ಬೆಳಗಾವಿ: ರಾಜ್ಯದ ಮಹಿಳೆಯರು ಈ ತನಕ ಎಷ್ಟು ಗೃಹಲಕ್ಷ್ಮಿ ಹಣವನ್ನು ದುಡಿದಿದ್ದಾರೆ ಗೊತ್ತೆ? ಈ ಬಗ್ಗೆ ರಾಜ್ಯ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೆಕ್ಕ ತೆರೆದಿಟ್ಟಿದ್ದಾರೆ. ಮಹಿಳೆಯರು ಸ್ವಾಭಿಮಾನದಿಂದ ಜೀವನ ಮಾಡಬೇಕು, ಆರ್ಥಿಕವಾಗಿ ಸಶಕ್ತರಾಗಬೇಕು ಎನ್ನುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು ಇದುವರೆಗೆ 23 ಕಂತು ಹಾಕಿದ್ದು, 26 ಸಾವಿರ ರೂ. ಪ್ರತಿಯೊಬ್ಬರಿಗೆ ಬಂದಿದೆ. ಈ ಮಾತಿಗೆ ನಾನು ಈಗಲೂ ಬದ್ಧಳಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದರು.
ಅವರು ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯವರು ಫೆಬ್ರವರಿ ಮತ್ತು ಮಾರ್ಚ್ ಹಣದ ಬಗ್ಗೆ ಕೇಳಿದ್ದು ಪ್ರತೀ ತಿಂಗಳು ನನ್ನ ಇಲಾಖೆಯಿಂದ ಹಣಕಾಸು ಇಲಾಖೆಗೆ ಪತ್ರ ಕಳುಹಿಸುತ್ತೇನೆ. ಅಲ್ಲಿಂದ ಬಂದ ಕೂಡಲೇ ನಾನು ಫೈಲ್ ಮೂವ್ ಮಾಡುತ್ತೇನೆ. ಈ ಎರಡು ತಿಂಗಳು ಹಣ ಬಂದಿಲ್ಲ ಅಂದರೆ ಹಣಕಾಸು ಇಲಾಖೆ ಹೇಳಬೇಕು. ಬಿಜೆಪಿಯವರು ಐದು ಸಾವಿರ ಕೋಟಿ ರೂ. ಬಿಡುಗಡೆಯಾಗಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಮಾತನಾಡಬೇಡಿ. ಎಷ್ಟು ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಿದೆಯೋ ಅಷ್ಟು ಹಣ ಸಂದಾಯ ಮಾಡಿದ್ದೇವೆ ಎಂದರು.
