Bangalore: ನಗರದ ಹೊರವಲಯದ ಗೋದಾಮಿನಲ್ಲಿ ಸಂಗ್ರಹ ಮಾಡಿಟ್ಟಿದ್ದ 90 ಲಕ್ಷ ರೂ. ಮೌಲ್ಯದ ತಲೆಕೂದಲನ್ನು ಕಿಡಿಗೇಡಿಗಳು ಕಳವು ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಕ್ಷ್ಮೀಪುರ ಕ್ರಾಸ್ ಸಮೀಪದ ವೆಂಕಟರಮಣ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಈ ಕೃತ್ಯ ನಡೆದಿದೆ. ಮಾಲೀಕರ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ವಿದೇಶದ ವಿಗ್ ತಯಾರಿಕಾ ಕಂಪನಿಗಳಿಗೆ ರಫ್ತು ಮಾಡಲೆಂದು ಸಂಗ್ರಹ ಮಾಡಿಟ್ಟಿದ್ದ ತಲೆ ಕೂದಲು ಇದಾಗಿತ್ತು ಎಂದು ತಿಳಿದು ಬಂದಿದೆ.
ಚೀನಾ, ಬರ್ಮಾ ಹಾಗೂ ಹಾಂಕಾಂಗ್‌ಗೆ ರಫ್ತು ಮಾಡಲು 27 ಮೂಟೆಗಳಲ್ಲಿ ಕೂದಲನ್ನು ದಾಸ್ತಾನು ಮಾಡಲಾಗಿತ್ತು. ಚೀನಾ ಮೂಲದ ವ್ಯಾಪಾರಿಗಳ ಜೊತೆ ಕಳೆದ ವಾರ ಕೂದಲು ಖರೀದಿ ಕುರಿತು ಮಾತುಕತೆ ನಡೆದಿತ್ತು. ಎರಡು ದಿನಗಳ ಹಿಂದೆ ಗೋದಾಮಿನ ಬೀಗ ಮುರಿದು ಆರು ಮಂದಿ ದುಷ್ಕರ್ಮಿಗಳು ಕಳ್ಳತನ ಮಾಡಿರುವ ಕುರಿತು ದೂರಲಾಗಿದೆ.
