Uttara Kannada: ಸುಮಾರು 45 ವರ್ಷಗಳಿಂದಲೂ ಯಾವ ಎಣ್ಣೆಯೂ ಇಲ್ಲದೇ ಉರಿಯುತ್ತಿದ್ದ ಐತಿಹಾಸಿಕ ಮೂರೂ ದೀಪಗಳು ನಂದಿ ಹೋದ ಘಟನೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ಪ್ರಸಿದ್ಧ ದೀಪನಾಥೇಶ್ವರ ದೇವಾಲಯದಲ್ಲಿ ನಡೆದಿದೆ. ಈ ಬೆನ್ನಲ್ಲೇ ರಾಜ್ಯಕ್ಕೆ ಗಂಡಾಂತರ ಎದುರಾಗಲಿದೆ ಎಂಬ ಆತಂಕ ಎದುರಾಗಿದೆ.
ಹೌದು, ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದಲ್ಲಿ ಸುಮಾರು 4 ದಶಕಗಳಿಂದ ಎಣ್ಣೆ ಇಲ್ಲದೆ ಉರಿಯುತ್ತಿದ್ದ ಮೂರು ದೀಪಗಳು ಬುಧವಾರ ಆರಿಹೋಗಿದ್ದು, ಭಕ್ತರಲ್ಲಿ ಆತಂಕ ಉಂಟಾಗಿದೆ. ಸುಮಾರು 45 ವರ್ಷಗಳಿಂದ ಮೂರು ದೀಪಗಳು ಯಾವುದೇ ಎಣ್ಣೆ ಹಾಗೂ ಬತ್ತಿ ಇಲ್ಲದೆ ಉರಿಯುತ್ತ ಬಂದಿದ್ದವು. ದೀಪಗಳು ಆರಿದ ಹಿನ್ನೆಲೆಯಲ್ಲಿ ಸದ್ಯ ದೇವಸ್ಥಾನದ ಗರ್ಭಗುಡಿಯನ್ನು ಮುಚ್ಚಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.
ಅಂದಹಾಗೆ 1979ರಲ್ಲಿ ದೈವಜ್ಞ ಶಾರದಮ್ಮ ಎಂಬುವವರು ಸೀಮೆಎಣ್ಣೆ ಹಾಕಿ ದೀಪವನ್ನು ಬೆಳಗಿಸಿದ್ದರು. ಅಲ್ಲಿಂದ ಈವರೆಗೂ ಈ ದೀಪಗಳು ಎಣ್ಣೆ, ಬತ್ತಿಯಿಲ್ಲದೇ ಬೆಳಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಸಾವಿರಾರು ಜನ ಭೇಟಿ ನೀಡಿ ಈ ಕೌತುಕವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಇವರ ಕುಟುಂಬವೇ ದೀಪನಾಥೇಶ್ವರ ಎಂಬ ಹೆಸರಿನಲ್ಲಿ ಪೂಜೆ ಮಾಡುತ್ತಾ ಬಂದಿದೆ. ಕಳೆದ 14 ದಿನದ ಹಿಂದೆ ದೀಪದ ಉಸ್ತುವಾರಿ ನೋಡಿಕೊಳ್ಳುತಿದ್ದ ವೆಂಕಟೇಶ್ ಎಂಬ ಅರ್ಚಕರು ನಿಧನರಾಗಿದ್ದಾರೆ. ಸೂತಕದ ಕಾರಣಕ್ಕೆ ದೇಗುಲದ ಗರ್ಭಗುಡಿ ಮುಚ್ಚಲಾಗಿತ್ತು. ಕಳೆದ ಬುಧವಾರ ಗರ್ಭಗುಡಿಯನ್ನು ಸ್ವಚ್ಛಗೊಳಿಸಲೆಂದು ಕುಟುಂಬಸ್ಥರು ತೆರಳಿದ್ದಾಗ ದೀಪ ಆರಿರುವುದು ಗಮನಕ್ಕೆ ಬಂದಿದೆ.
ಇನ್ನು ಈ ದೀಪಗಳು ಸುಮಾರು ೪೫ ವರ್ಷಗಳಿಂದಲೂ ನಿರಂತರವಾಗಿ ಉರಿಯುತ್ತಿದ್ದು, ನಿತ್ಯ ಭಕ್ತರು ದರ್ಶನ ಪಡೆಯುತ್ತಿದ್ದರು. ಕಷ್ಟ-ಕಾರ್ಪಣ್ಯ ದೂರ ಮಾಡುವಂತೆ ಬೇಡಿಕೊಳ್ಳುತ್ತಿದ್ದರು. ಈಗ ದೀಪ ಆರಿಹೋಗಿರುವ ಹಿನ್ನೆಲೆ ಮುಂದೇನು ಮಾಡಬೇಕು ಎಂದು ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ. ತುರ್ತು ಹೋಮ- ಹವನಾದಿಗಳನ್ನು ನಡೆಸಲು ತೀರ್ಮಾನಿಸಿದ್ದಾರೆ. ಭಕ್ತರು ಯಾವುದೇ ರೀತಿ ಆತಂಕಕ್ಕೊಳಗಾಗಬಾರದು ಎಂದು ದೀಪನಾಥೇಶ್ವರ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಶೇಷಾದ್ರಿ ಕೆ. ಹಾಗೂ ಕಾರ್ಯದರ್ಶಿ ಚಂದ್ರಮೋಹನ ಮನವಿ ಮಾಡಿದ್ದಾರೆ.
