Mangaluru : ಪಹಲ್ಗಾಂ ಅಟ್ಯಾಕ್ ಬಳಿಕ ಕೇಂದ್ರ ಸರ್ಕಾರವು ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳು 48 ಗಂಟೆಗಳ ಒಳಗಡೆ ಭಾರತವನ್ನು ಬಿಡಬೇಕು ಎಂದು ಆದೇಶಿಸಿದೆ. ಜೊತೆಗೆ ಪ್ರತಿ ರಾಜ್ಯದ ಮುಖ್ಯಮಂತ್ರಿಗಳಿಗೆ ಈ ಕುರಿತು ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇರುವ ಪಾಕಿಸ್ತಾನದ ಪ್ರಜೆಗಳ ಶೋಧ ನಡೆಯುತ್ತಿದೆ. ಈ ಬೆನ್ನಲ್ಲೇ ಮಂಗಳೂರಿನಲ್ಲಿ ಮೂವರು ವಿವಾಹಿತ ಪಾಕಿಸ್ತಾನ ಮಹಿಳೆಯರು ಪತ್ತೆಯಾಗಿದ್ದಾರೆ.
ಹೌದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪಾಕಿಸ್ಥಾನದಿಂದ ಬಂದು ಮದುವೆಯಾಗಿ ನೆಲೆಸಿರುವ ಮೂರು ಮಂದಿ ಮಹಿಳೆಯರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಓರ್ವ ಮಹಿಳೆ ನಗರದ ಹೊರವಲಯದ ವಾಮಂಜೂರು, ಇನ್ನೊಬ್ಬಾಕೆ ನಗರದ ಫಳ್ನೀರ್‌ನಲ್ಲಿ ವಾಸವಾಗಿದ್ದಾರೆ. ಮತ್ತೋರ್ವ ಮಹಿಳೆಯ ವಾಸವಿರುವ ಸ್ಥಳದ ಕುರಿತು ಮಾಹಿತಿ ಬಂದಿಲ್ಲ.
ಈ ಮಹಿಳೆಯರು 12-13 ವರ್ಷಗಳ ಹಿಂದೆಯೇ ಮದುವೆಯಾಗಿ ನಗರಕ್ಕೆ ಬಂದು ವಾಸವಾಗಿದ್ದಾರೆ. ನಗರ ಪೊಲೀಸ್ ಆಯುಕ್ತಾಲಯದಿಂದ ಮಹಿಳೆಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ರಾಜ್ಯ ಗೃಹ ಇಲಾಖೆಗೆ ಕಳುಹಿಸಲಾಗಿದೆ. ಮದುವೆಯಾಗಿ ಕುಟುಂಬದೊಂದಿಗೆ ವಾಸವಾಗಿರುವುದರಿಂದ, ಅವರನ್ನು ವಾಪಸು ಕಳುಹಿಸುವ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಯಾವ ರೀತಿಯ ನಿರ್ದೇಶನ ಬರುತ್ತದೆಯೋ ಅದರಂತೆ ಕ್ರಮ ವಹಿಸಲಾಗುವುದು. ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
