500 Note: ನೋಟು ಬದಲಾವಣೆ ವಿಚಾರ ಹಾಗೂ ನೋಟ್ ಬ್ಯಾನ್ ವಿಚಾರ ದೇಶದಲ್ಲಿ ಆಗಾಗ ಚರ್ಚೆಗೆ ಬರುತ್ತಿವೆ. ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು 2,000 ರೂ ನೋಟುಗಳನ್ನು ಹಿಂಪಡೆಯುವ ಮೂಲಕ ಆ ನೋಟನ್ನು ರದ್ದುಗೊಳಿಸಿತ್ತು. ಈ ಬೆನ್ನಲ್ಲೇ 500 ರೂಪಾಯಿ ನೋಟು ಕೂಡ ಬ್ಯಾನ್ ಆಗುತ್ತದೆ ಎಂಬ ವಾದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಹರಡುತ್ತಿದೆ. ಇದೀಗ ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಘೋಷಣೆಯನ್ನು ಹೊರಡಿಸಿದೆ.
ಹೌದು, ಕೆಲ ಸಮಯದಿಂದ 500 ರೂಪಾಯಿ ನೋಟುಗಳು ಬ್ಯಾನ್ ಆಗಲಿವೆ ಎಂಬ ವೈರಲ್ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಗೊಂದಲ ಸೃಷ್ಟಿಸಿದೆ. ಈ ವೀಡಿಯೊವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, 500 ರೂಪಾಯಿ ನೋಟುಗಳು ಕಾನೂನುಬದ್ಧ ಚಲಾವಣೆಯಲ್ಲಿ ಉಳಿಯಲಿವೆ ಎಂದು ಸ್ಪಷ್ಟಪಡಿಸಿದೆ.
ಅಂದಹಾಗೆ ಜೂನ್ 2, 2025 ರಂದು ‘ಕ್ಯಾಪಿಟಲ್ ಟಿವಿ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಆದ ಸುಮಾರು 12 ನಿಮಿಷಗಳ ವೀಡಿಯೊದಲ್ಲಿ, 2026ರ ಮಾರ್ಚ್‌ನಿಂದ 500 ರೂಪಾಯಿ ನೋಟುಗಳು ಹಂತಹಂತವಾಗಿ ರದ್ದಾಗಲಿವೆ ಎಂದು ಹೇಳಲಾಗಿತ್ತು. ಈ ವೀಡಿಯೊ 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ, PIB ಈ ದಾವೆಯನ್ನು ಸಂಪೂರ್ಣ ಸುಳ್ಳು ಎಂದು ತಿರಸ್ಕರಿಸಿದ್ದು, RBI ಯಾವುದೇ ಇಂತಹ ಘೋಷಣೆಯನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
