Chikkamagaluru: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಬಂದೂಕು ಹಿಡಿದು ಹೋರಾಟ ಮಾಡಿದ ಆರು ಮಂದಿ ನಕ್ಸಲರು ಇಂದು (ಬುಧವಾರ) ಶರಣಾಗತಿಗೆ ಸಮ್ಮತಿಸಿದ್ದು, ಹೀಗಾಗಿ ನಕ್ಸಲ್ ಚಳುವಳಿಗೆ ಅಂತ್ಯ ಕಾಣುವ ಕಾಲ ಹತ್ತಿರ ಬಂದಿದೆ.
ಇಂದು ಬುಧವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಮುಂದೆ ಮುಂಡಗಾರು ಲತಾ, ಸುಂದರಿ ಕುಟ್ಟೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಅಲಿಯಾಸ್ ಜಯಣ್ಣ ಶರಣಾಗಲಿದ್ದಾರೆ.
ಚಿಕ್ಕಮಗಳೂರು ನಗರಕ್ಕೆ ಇಂದು ಬೆಳಗ್ಗೆ ಹತ್ತು ಗಂಟೆಗೆ ಬರಲಿದ್ದು, ಇವರನ್ನು ಪ್ರವಾಸಿ ಮಂದಿರದ ಬಳಿ ಶಾಂತಿಗಾಗಿ ನಾಗರಿಕ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರು ಸ್ವಾಗತ ಕೋರಲಿದ್ದಾರೆ. ನಂತರ ಅವರ ಸಂಬಂಧಿಕರು ಭೇಟಿ ಮಾಡಲಿದ್ದಾರೆ. ಅನಂತರ ಶಾಂತಿಗಾಗಿ ನಾಗರಿಕ ವೇದಿಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಎದುರು ಹಾಜರು ಮಾಡಲಿದ್ದಾರೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎನ್ನಲಾಗಿದೆ.
