Bantwal: ಬಂಟ್ವಾಳ (Bantwal)ಸಜೀಪಪಡು ಗ್ರಾಮದ ಸಹಾಯಕ ಅಂಚೆಪಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿ ರಾಯದುರ್ಗ ತಾಲೂಕಿನ ಅರಿಬೆಂಚಿ ನಿವಾಸಿ ಬಾಳಪ್ಪ ತೆಗ್ಯಾಳ್(28) ಸಜೀಪನಡು ಗ್ರಾಮದ ಅಂಚೆ ಕಚೇರಿಯ ಟಪ್ಪಾಲು ಚೀಲದಲ್ಲಿದ್ದ 72 ಸಾವಿರ ರೂ.ಗಳೊಂದಿಗೆ ನಾಪತ್ತೆಯಾಗಿದ್ದಾನೆ.
ಕಳೆದ 1 ವರ್ಷದಿಂದ ಸಜೀಪಪಡು ಗ್ರಾಮದಲ್ಲಿ ಸಹಾಯಕ ಅಂಚೆ ಪಾಲಕನಾಗಿದ್ದು, ಫೆ. 19ರಂದು ಸಜೀಪನಡು ಗ್ರಾಮ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್‌ಅಸ್ಮಿನಾ ಬಾನು ಅವರು ತನ್ನ ಕಚೇರಿಯ ಟಪ್ಪಾಲು ಚೀಲವನ್ನು ಬಾಳಪ್ಪನಲ್ಲಿ ನೀಡಿ ಪಾಣೆಮಂಗಳೂರು ಅಂಚೆ ಕಚೇರಿಗೆ ತಲುಪಿಸುವಂತೆ ತಿಳಿಸಿದ್ದಾರೆ. ಆದರೆ ಆತ ಪಾಣೆಮಂಗಳೂರು ಕಚೇರಿಗೆ ಹೋಗದೆ ಇದ್ದು, ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಬಳಿಕ ಸಜೀಪಮೂಡ ಗ್ರಾಮದ ಕಂದೂರಿನಲ್ಲಿರುವ ಆತನ ಬಾಡಿಗೆ ಮನೆಗೆ ಬಂದು ನೋಡಿದಾಗ ಟಪ್ಪಾಲು ಚೀಲ ಅಲ್ಲಿತ್ತಾದರೂ ಅದರಲ್ಲಿ ಹಣ ಇರಲಿಲ್ಲ. ಆತನ ಮನೆಯವರನ್ನು ಸಂಪರ್ಕಿಸಿದ್ದು, ಆತ ಮನೆಗೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದೀಗ ಅಸ್ಮಿನಾ ಬಾನು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
