Kaup: ವಿವಾಹ ಸಮಾರಂಭದ ಸಮಯದಲ್ಲಿ ದೇವಾಲಯದ ಕರೆಯ ಬಳಿ ಆಕಸ್ಮಿಕವಾಗಿ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ನಂದಿಕೂರಿನಲ್ಲಿ ಮೇ 11 ರಂದು ನಡೆದಿದೆ.
ಮೃತಪಟ್ಟ ಮಗುವನ್ನು ಕಾಪು ಕುರ್ಕಾಲು ಗ್ರಾಮದ ನಿವಾಸಿಗಳಾದ ಸತ್ಯನಾರಾಯಣ, ಸೌಮ್ಯ ಅವರ ಪುತ್ರ ವಾಸುದೇವ (4) ಎಂದು ಗುರುತಿಸಲಾಗಿದೆ.
ನಂದಿಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿವಾಹಕ್ಕೆ ಬಂದ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೌಮ್ಯ ಅವರು ತಮ್ಮ ಕಿರಿಯ ಮಗ ವಿಷ್ಣು ಪ್ರಿಯಾ (1) ಗೆ ಊಟ ಮಾಡಿಸುತ್ತಿದ್ದರು. ವಾಸುದೇವ ಕೂಡಾ ತಾಯಿಯ ಹತ್ತಿರ ಇದ್ದನು.
ಮಗು ಊಟ ಮಾಡಿದ ನಂತರ, ಸೌಮ್ಯ ಅವರು ಕೈ ತೊಳೆಯಲೆಂದು ಹೊರಗೆ ಹೋಗಿದ್ದರು. ಹಿಂತಿರುಗಿ ಬಂದಾಗ ವಾಸುದೇವ ಕಾಣೆಯಾಗಿರುವುದು ಕಂಡು ಬಂದಿದೆ. ಸಭಾಂಗಣದಲ್ಲಿದ್ದ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರಿಗೆ ಅವರು ಈ ವಿಷಯ ತಿಳಿಸಿದ್ದು, ಹುಡುಕಾಟ ಮಾಡಿದ್ದಾರೆ. ಆದರೆ ಮಗು ಪತ್ತೆಯಾಗಲಿಲ್ಲ.
ಸುಮಾರು 2.15 ರ ಸುಮಾರಿಗೆ ವಾಸುದೇವನ ದೇಹವು ಸಮಾರಂಭದ ಸ್ಥಳದ ಪಕ್ಕದಲ್ಲಿದ್ದ ದೇವಾಲಯದ ಕೆರೆಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಅಲ್ಲಿದ್ದವರು ಮಗುವನ್ನು ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನ ಪಟ್ಟರು. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಕೂಡಲೇ ಸೌಮ್ಯ ಅವರು ತಮ್ಮ ಪತಿಗೆ ಈ ವಿಷಯ ತಿಳಿಸಿದ್ದಾರೆ. ಮಗುವನ್ನು ಉಡುಪಿಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಮಗು ಸಾವಿಗೀಡಾಗಿರುವುದು ಘೋಷಿಸಿದರು. ನಂತರ ಮಗುವನ್ನು ಮಣಿಪಾಲದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿಯೂ ವೈದ್ಯರು ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
