Snake Birthday: ಇಲ್ಲೊಬ್ಬ ಯುವಕ ಹಾವಿನ ‘ಹುಟ್ಟುಹಬ್ಬ’ ಆಚರಣೆ ಮಾಡಿದ್ದಾನೆ! ಆದರೆ ಹಾವಿನ ಹುಟ್ಟುಹಬ್ಬ ವಿಚಾರ ವಿಡಿಯೋ ವೈರಲ್ ಆಗುತ್ತಿದ್ಧಂತೆ ಆತ ಜೈಲುಪಾಲಾಗಿದ್ದಾನ.
ಬಂಧಿತ ಯುವಕನನ್ನು ಧುಲೆ ಜಿಲ್ಲೆಯ ಶಿರ್ಪುರ್ ತಾಲೂಕಿನ ಬೋರೆಡಿ ಗ್ರಾಮದ ನಿವಾಸಿ ರಾಜ್ ಸಾಹೇಬ್ ರಾವ್ ವಾಘ್ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು, ನಾಗರ ಪಂಚಮಿಯ ದಿನದಂದು (ಜುಲೈ 29), ವಾಘ್ ಗ್ರಾಮದ ಬಳಿ ನಾಗರಹಾವನ್ನು ಹಿಡಿದು, ಅದನ್ನು ಮನೆಗೆ ತಂದ ಯುವಕ, ಬಳಿಕ ಕೇಕ್ ಕತ್ತರಿಸಿ ಅದರ ಹುಟ್ಟುಹಬ್ಬ ಆಚರಿಸಿದ್ದ. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಅದು ಭಾರಿ ವೈರಲ್ ಆಗಿತ್ತು.
ಈ ವಿಚಾರ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿದ್ದು, ಅರಣ್ಯ ರಕ್ಷಕ ಗಿರ್ವಾಲೆ ನೇತೃತ್ವದ ತಂಡ ದಾಳಿ ನಡೆಸಿ ಯುವಕ ರಾಜ್ ಸಾಹೇಬ್ ರಾವ್ನನ್ನು ಬಂಧಿಸಿದ್ದಾರೆ. ಯುವಕನ ಮನೆಯಿಂದ ಎರಡು ಪ್ಲಾಸ್ಟಿಕ್ ಪೆಟ್ಟಿಗೆಗಳು ಮತ್ತು ವಿಡಿಯೋ ರೆಕಾರ್ಡ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸೆಕ್ಷನ್ 9 ಮತ್ತು 51(1) ರ ಅಡಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ, ಯುವಕ ರಾಜ್ ಸಾಹೇಬ್ ರಾವ್ ತಾನು ಹಾವಿನ ಹುಟ್ಟುಹಬ್ಬ ಆಚರಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
