ಸಹಕಾರ ಕ್ಷೇತ್ರಕ್ಕೆ ಹೆಚ್ಚೆಚ್ಚು ಯುವಕರ ಪ್ರವೇಶವಾಗಬೇಕು ಎಂಬ ಕೂಗಿನ ಮಧ್ಯೆಯೇ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು(ಕೆಎಸ್‌ಎಸ್) ವಿದ್ಯಾರ್ಥಿನಿಯೊಬ್ಬರು ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಆಡಳಿತ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ.
ಹೌದು, ಕಡಬ ಗ್ರಾಮದ ಅರ್ತಿಲದ ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ರೈ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಆಡಳಿತ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ಅಚ್ಚರಿ ಏನೆಂದರೆ ಇವರಿನ್ನೂ ಅಂತಿಮ ಬಿಬಿಎ ವಿದ್ಯಾರ್ಥಿನಿ!! ಮೊದಲಿಗೆ ಕಾಲೇಜಿನ ಓದಿಗೆ ತೊಂದರೆ ಆಗುತ್ತದೆ ಎಂದಿದ್ದ ಸ್ವಾತಿ ರೈ ಕೊನೆಗೆ ಅವಕಾಶ ಸದುಪಯೋಗ ಮಾಡಿಕೊಳ್ಳಲು ಒಪ್ಪಿಕೊಂಡರು. ಇದೀಗ ಬ್ಯಾಂಕ್‌ನ ಆಡಳಿತ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾದ್ದಾರೆ.
ಅಂದಹಾಗೆ ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಬ್ಯಾಂಕ್‌ಗೆ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಅತ್ಯಂತ ಕಿರಿಯ ಸದಸ್ಯೆ. ಕಡಬ ಗ್ರಾಮದ ಅರ್ತಿಲ ದಿ. ಆನಂದ ರೈ ಮತ್ತು ತಾರಾ ರೈ ದಂಪತಿ ಪುತ್ರಿ ಸ್ವಾತಿ ರೈಗೆ ಈ ಅವಕಾಶ ಅಚಾನಕ್ ಆಗಿ ಬಂದಿದೆ. ಈ ಅವಕಾಶ ಮೊದಲಿಗೆ ತಾಯಿ ತಾರಾ ರೈ ಅವರಿಗೆ ಬಂದಿತ್ತು. ಆದರೆ ಅವರು ಈ ಅವಕಾಶವನ್ನು ನಿರಾಕರಿಸಿದ್ದರು. ಈ ಸಂದರ್ಭ ಸ್ವಾತಿಯ ದೊಡ್ಡಪ್ಪನ ಮಗ ಅಜಿತ್ ರೈ ಅವರು ಸ್ವಾತಿಗೆ ಈ ಅವಕಾಶ ಬಳಕೆ ಮಾಡಿಕೊಳ್ಳುವ ಸಲಹೆ ನೀಡಿ ಪ್ರೋತ್ಸಾಹಿಸಿದರು. ಆಕೆಯ ಚಿಕ್ಕಪ್ಪ ಚೇತನ್ ರೈ, ಹಾಗೂ ಕಡಬ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ. ಅವರೂ ಧೈರ್ಯ ತುಂಬಿದರು. ಕೊನೆಗೆ ಎಲ್ಲರ ಸಲಹೆಯಂತೆ ಸ್ವಾತಿ ರೈ ಒಪ್ಪಿಕೊಂಡರು. ಇದೀಗ ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿರುವ ಈಕೆ ಸಾಧ್ಯವಾದಷ್ಟು ರೈತರ ಸೇವೆ ಮಾಡಲು ಈ ಅವಕಾಶ ಉಪಯೋಗಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾತಿ ರೈ, ಓದಿಗೆ ತೊಂದರೆಯಾದಿತು ಎಂದು ಮೊದಲಿಗೆ ನನಗೆ ಇದೆಲ್ಲಾ ಬೇಡ ಅಂದಿದ್ದೆ. ಮನೆಯವರ ಪ್ರೋತ್ಸಾಹ ಸಿಕ್ಕಿತ್ತು. ಬಳಿಕ ಎಲ್ಲ ರೀತಿಯಲ್ಲೂ ಯೋಚಿಸಿ ಅವಕಾಶ ಬಳಸಿಕೊಳ್ಳು ಗಟ್ಟಿ ನಿರ್ಧಾರ ಮಾಡಿಕೊಂಡೆ. ಸಾಧ್ಯವಾದಷ್ಟು ರೈತರಿಗೆ ಸಹಾಯ ಮಾಡುವ ಅವಕಾಶ ಬಂದಿದೆ ಎಂದುಕೊಂಡು ಒಪ್ಪಿಗೆ ಕೊಟ್ಟೆ, ಆಯ್ಕೆಯಾಗಿದೆ. . ತುಂಬಾ ಖುಷಿಯಾಗಿದೆ ಎನ್ನುತ್ತಾರೆ.
