Gold Suresh: ಮಾಜಿ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಕೇಬಲ್ ಚಾನೆಲ್ ಸೆಟ್ ಅಪ್ ಮಾಡಿ ಕೊಡೋದಾಗಿ ಹೇಳಿ ಹಣ ಪಡೆದು ಗೋಲ್ಡ್ ಸುರೇಶ್ ಲಕ್ಷಾಂತರ ಹಣ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಇದೀಗ ಈ ಆರೋಪಕ್ಕೆ ಗೋಲ್ಡ್ ಸುರೇಶ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಹೌದು, ಸುರೇಶ್ ಅವರು ಕೇಬಲ್ ಚಾನೆಲ್ನ ಸೆಟಅಪ್ ಮಾಡಿ ಕೊಡುವುದಾಗಿ ಹೇಳಿದ್ದರು. 14 ಲಕ್ಷಕ್ಕೆ ಒಪ್ಪಂದ ಕೂಡ ಆಗಿತ್ತು. ಹಾಗೂ ಸುರೇಶ್ 4 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಹಂತ ಹಂತವಾಗಿ ಏಳು ಲಕ್ಷ ರೂ ಹಣನ ಸುರೇಶ್ಗೆ ಮೈನುದ್ದೀನ್ ನೀಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ ಅರ್ಧಂಬರ್ಧ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಈಗ ಅವರು ಹಣವನ್ನು ಮರಳಿ ನೀಡುತ್ತಿಲ್ಲ ಎಂದು ಮೈನುದ್ದೀನ್ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಈ ಎಲ್ಲ ಆರೋಪಗಳಿಗೂ ಗೋಲ್ಡ್ ಸುರೇಶ್ ಅವರು ಮಾಧ್ಯಮಗಳ ಮುಂದೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಗೋಲ್ಡ್ ಸುರೇಶ್ ಹೇಳಿದ್ದೇನು?
‘ದುಡ್ಡು ಕೊಟ್ಟರೆ ಮಾತ್ರ ಕೆಲಸ ಮುಂದುವರಿಸುತ್ತೇನೆ ಅಂತ ಅವರಿಗೆ ಹೇಳಿದ್ದೆ. ಯಾಕೆಂದರೆ ಈ ರೀತಿ ತುಂಬ ಪೆಟ್ಟುಗಳನ್ನು ನಾನು ತಿಂದಿದ್ದೆ. ಅವರ ವರ್ತನೆ ನನಗೆ ಇಷ್ಟ ಆಗಲಿಲ್ಲ. ಹಾಗಾಗಿ ಕೆಲಸ ಮಾಡಲ್ಲ ಅಂತ ಹೇಳಿ ಬೆಂಗಳೂರಿಗೆ ವಾಪಸ್ ಬಂದೆ. ಅವರು ನಮಗೆ 7 ಲಕ್ಷ ರೂಪಾಯಿ ನೀಡಿದ್ದರು. ಕೆಲಸ ಮಾಡಲ್ಲ ಎಂದರೆ ದುಡ್ಡು ವಾಪಸ್ ಕೊಡಿ ಅಂದರು. ಅಲ್ಲಿಯವರೆಗೆ ಕೆಲಸಕ್ಕೆ ತಗುಲಿದ ಹಣವನ್ನು ಬಿಟ್ಟು ಉಳಿದ ಹಣವನ್ನು ನಾನು ಅವರಿಗೆ ವಾಪಸ್ ನೀಡಿದ್ದೇನೆ’ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು ‘ಸಡನ್ ಆಗಿ ಬೆಳಗ್ಗೆ ಒಂದು ಕರೆ ಬರುತ್ತದೆ. 6 ಲಕ್ಷ ರೂಪಾಯಿ ಹಣ ನೀಡದಿದ್ದರೆ ಮಾಧ್ಯಮಗಳ ಎದುರು ಹೋಗುತ್ತೇನೆ ಎಂದರು. ಈ ರೀತಿ ನನಗೆ ಬೆದರಿಕೆ ಹಾಕಿದರು. ನಾನು ಬಿಗ್ ಬಾಸ್ ಮುಗಿಸಿ ಬಂದ ಮೇಲೆ ಈ ವ್ಯಕ್ತಿ ಫೋನ್ ಮಾಡಿ ಸಹಾಯ ಮಾಡಿ ಅಂತ ಕೇಳಿದರು. ಹಾಗಾಗಿ ಮಾನವೀಯತೆ ದೃಷ್ಟಿಯಿಂದ 50 ಸಾವಿರ ರೂಪಾಯಿ ಕೊಡಿಸಿದ್ದೇನೆ. ಇದನ್ನು ಹೊರತುಪಡಿಸಿ ನಮಗೂ ಅವರಿಗೂ ಯಾವುದೇ ವ್ಯವಹಾರ ಇಲ್ಲ’ ಎಂದು ಗೋಲ್ಡ್ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ‘ಆತನ ವಿರುದ್ಧ ನಾನು ಕ್ರಮ ತೆಗೆದುಕೊಂಡಿದ್ದೇನೆ. ನ್ಯಾಯಾಲಯದ ಮೂಲಕ ಹೋರಾಟ ಮಾಡುತ್ತೇನೆ. ಮಾಧ್ಯಮಗಳಲ್ಲಿ ಆ ವ್ಯಕ್ತಿ ಏನು ಬೇಕಾದರೂ ಹೇಳುತ್ತಾನೆ. ನಾನು ಒಂದು ಕಡೆ ಇರುವ ವ್ಯಕ್ತಿ ಅಲ್ಲ. ಬಿಸ್ನೆಸ್ ಮ್ಯಾನ್ ಆದ್ದರಿಂದ ಅನೇಕ ಕಡೆಗಳಿಗೆ ಹೋಗುತ್ತೇನೆ. ನನ್ನ ಮೇಲೆ ಏನೂ ಕೇಸ್ ಆಗಿಲ್ಲ. ಆದರೆ ಆ ವ್ಯಕ್ತಿ ಮೇಲೆ ಕೇಸ್ ಹಾಕಿದ್ದೇನೆ’ ಎಂದಿದ್ದಾರೆ ಸುರೇಶ್.
