Home » Bengaluru: ರ‍್ಯಾಪಿಡೋ ಚಾಲಕನಿಂದ ಯುವತಿಗೆ ಹಲ್ಲೆ ಕೇಸ್‌ಗೆ ಭಾರೀ ಟ್ವಿಸ್ಟ್ – ಸಿಸಿಟಿವಿ ದೃಶ್ಯದಲ್ಲಿ ಬಯಲಾಯ್ತು ಅಸಲಿ ಸತ್ಯ!

Bengaluru: ರ‍್ಯಾಪಿಡೋ ಚಾಲಕನಿಂದ ಯುವತಿಗೆ ಹಲ್ಲೆ ಕೇಸ್‌ಗೆ ಭಾರೀ ಟ್ವಿಸ್ಟ್ – ಸಿಸಿಟಿವಿ ದೃಶ್ಯದಲ್ಲಿ ಬಯಲಾಯ್ತು ಅಸಲಿ ಸತ್ಯ!

by V R
0 comments

Bengaluru : ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿಕೊಂಡು ಹೋಗುತ್ತಿದ್ದ ಯುವತಿ ಶ್ರೇಯಾ ಮೇಲೆ ರ‍್ಯಾಪಿಡೋ ಬೈಕ್ ಚಾಲಕ ಸುಹಾಸ್ ಹಲ್ಲೆ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಘಟನೆ ಹೊಸ ತಿರುವು ಪಡೆದುಕೊಂಡಿದೆ. ಸಿಸಿಟಿವಿ ದೃಶ್ಯಗಳು ಸಂಪೂರ್ಣ ಘಟನೆಗೆ ಹೊಸ ಆಯಾಮ ನೀಡಿವೆ.

 

ಆರಂಭದಲ್ಲಿ ಬೈಕ್‌ ಟ್ಯಾಕ್ಸಿ ಸವಾರನೇ ಯುವತಿ ಮೇಲೆ ಮೊದಲು ಹಲ್ಲೆ ಮಾಡಿದ್ದು ಎನ್ನಲಾಗಿತ್ತು. ಆದರೆ ಇದೀಗ ಮತ್ತೊಂದು ಆಯಾಮದ ವಿಡಿಯೊ ಹೊರಬಿದ್ದಿದ್ದು, ಯುವತಿಯೇ ಮೊದಲು ಬೈಕ್‌ ಟ್ಯಾಕ್ಸಿ ಸವಾರನ ಕಪಾಳಕ್ಕೆ ಬಾರಿಸಿರುವುದು ಬೆಳಕಿಗೆ ಬಂದಿದೆ. ಅತ್ತ ಸವಾರನೂ ಸಹ ಈ ಕುರಿತು ವಿಡಿಯೊ ಹಂಚಿಕೊಂಡಿದ್ದು ಯುವತಿಯೇ ಮೊದಲು ಹಲ್ಲೆ ನಡೆಸಿದ್ದು, ಎಂದು ಆರೋಪಿಸಿದ್ದಾನೆ.

 

ಆಭರಣದ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಅತಿಯಾದ ವೇಗದ ಕಾರಣ ನೀಡಿ ಅರ್ಧಕ್ಕೆ ಟ್ರಿಪ್‌ ಮುಕ್ತಾಯಗೊಳಿಸಲು ಮುಂದಾಗಿದ್ದಾಳೆ. ಇದರಿಂದ ಕುಪಿತಗೊಂಡ ಸವಾರ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ. ಈ ಸಮಯದಲ್ಲಿ ಯುವತಿ ಟ್ಯಾಕ್ಸಿ ಸವಾರನ ಮೇಲೆ ಹಲ್ಲೆ ಮಾಡಿದ್ದಾಳೆ. ಬೆನ್ನಲ್ಲೇ ಸವಾರ ಸಹ ಆಕೆಯ ಕೆನ್ನೆಗೆ ಬಾರಿಸಿದ್ದಾನೆ.

 

ಅಂದಹಾಗೆ ಮೊದಲು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು CCTV ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಯುವತಿ ಶ್ರೇಯಾ ಮೊದಲಿಗೆ ಬೈಕ್‌ನಿಂದ ಇಳಿದು, ಚಾಲಕ ಸುಹಾಸ್‌ನ ಬೆನ್ನಿಗೆ ಎರಡು ಬಾರಿ ಹೊಡೆದಿರುವುದು ಸ್ಪಷ್ಟವಾಗಿದೆ. ಇಷ್ಟಕ್ಕೆ ಸುಮ್ಮನಾಗದೇ ಬೈಕ್‌ನಿಂದ ಇಳಿದ ನಂತರವೂ ಒಮ್ಮೆ ಯುವಕನ ಕೆನ್ನೆಗೆ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡ ಚಾಲಕ ಸುಹಾಸ್ ಕೂಡ ಸಿಟ್ಟಿನಲ್ಲಿ ಒಂದು ಹೊಡೆತ ಕೊಟ್ಟಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

 

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಅವರು ಮಾತನಾಡಿ, ‘ಸದ್ಯ ಚಾಲಕ ಸುಹಾಸ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಶ್ರೇಯಾ ಅವರ ದೂರು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಇಬ್ಬರನ್ನೂ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.

 

You may also like