Tiger attack: ಚಾಮರಾಜನಗರ ತಾಲೂಕಿನ ಬೇಡಗುಳಿ ಹಾಗೂ ರಾಮಯ್ಯನಪೋಡುವಿನಲ್ಲಿ ನಿನ್ನೆ ಸಂಜೆ ಹಾಗೂ ಇಂದು ಹುಲಿ ದಾಳಿ ನಡೆಸಿದ್ದು, ಓರ್ವ ಮಹಿಳೆ ಮೃತಪಟ್ಟರೆ, ಮತ್ತೋರ್ವ ಯುವಕ ತೀವ್ರ ಗಾಯಗೊಂಡು ಸಿಮ್ಸ್ ಆಸತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಮಯ್ಯನಡುವಿನಲ್ಲಿ ಜೂನ್ 9 ರಂದು ಸಂಜೆ ರವಿ (38) ಎಂಬುವರು ಮನೆಯಿಂದ ಹೊರಗಡೆ ಬಂದ ಸಂದರ್ಭದಲ್ಲಿ ಮನೆಯ ಮುಂಭಾಗವೇ ಇದ್ದ ಹುಲಿ ಇವರ ಮೇಲೆರಗಿ ತೀವ್ರ ದಾಳಿ ಮಾಡಿ ಗಾಯಗೊಳಿಸಿದೆ. ದಾಳಿಯಿಂದ ಒದ್ದಾಡುತ್ತಿದ್ದ ರವಿ ಅವರನ್ನು ತಕ್ಷಣವೇ ಎಡಬೆಟ್ಟದ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಬೇಡಗುಳಿ ಗ್ರಾಮದಲ್ಲಿ ಮಂಗಳವಾರ ರಂಗಮ ಎಂಬುವವರು ಮನೆಯಿಂದ ಹೊರಗಡೆ ಬಂದ ಸಂದರ್ಭದಲ್ಲಿ ಮಹಿಳೆ ರಂಗಮ (55) ಎಂಬುವರ ಮೇಲೂ ಹುಲಿ ದಾಳಿ ನಡೆಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಗಮ್ಮ ಹಾಗೂ ರವಿ ಮೇಲೆ ದಾಳಿ ನಡೆಸಿರುವ ಹುಲಿ ಒಂದೇ ಆಗಿದ್ದು ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದೆ ಎಂದು ಬಿಆರ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ಶ್ರೀಪತಿ ತಿಳಿಸಿದ್ದಾರೆ.
ಕೆಲವೇ ತಾಸುಗಳಲ್ಲಿ ಹುಲಿ ಸೆರೆ
ಹುಲಿ ದಾಳಿಯ ಮಾಹಿತಿಯಿಂದ ಎಚ್ಚೆತ್ತ ಬಿಆರ್’ಟಿ ಅರಣ್ಯಾಧಿಕಾರಿಗಳು, ಭೀಮ ಮತ್ತು ಗಜೇಂದ್ರ ಎಂಬ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ, ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಆಸ್ಪತ್ರೆಗೆ ಶಾಸಕ ಭೇಟಿ, ಸಾಂತ್ವನ, ವೈಯಕ್ತಿಕ ಪರಿಹಾರ
ವಿಷಯ ತಿಳಿದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ರಾಮಯ್ಯನ ಪೋಡುವಿನ ರವಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ಆರೋಗ್ಯ ವಿಚಾರಿಸಿದರು. ವೈಯಕ್ತಿಕವಾಗಿ ಪರಿಹಾರ ನೀಡಿದರು. ನಂತರ ಆರೋಗ್ಯದ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದುಕೊಡರು. ಈ ಸಂದರ್ಭದಲ್ಲಿ ಡಾ. ಮಾರುತಿ ತಾ.ಪಂ. ಮಾಜಿ ಸದಸ್ಯ ಕುಮಾರ್‌ನಾಯಕ್ ಬೇಡಗುಳಿ ಗ್ರಾಪಂ. ಮಾಜಿ ಅಧ್ಯಕ್ಷ ಶಿವಾನಾಯಕ್ ಮುಖಂಡ ಶಂಕರ್ ಮತ್ತು ವಿನೋದ್, ವೈದ್ಯಾಧಿಕಾರಿಗಳಿದ್ದರು.
ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ
ಇದೇ ವೇಳೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಾಹಿತಿ ತಿಳಿದು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು ವ್ಯಕ್ತಪಡಿಸಿದ್ದಾರೆ.
