7
ಹೊಸದಿಲ್ಲಿ: ವಿಳಾಸ, ಜನ್ಮ ದಿನಾಂಕದಂತಹ ವೈಯಕ್ತಿಕ ವಿವರ ಬಿಟ್ಟು ವ್ಯಕ್ತಿ ಭಾವಚಿತ್ರ, ಕ್ಯುಆರ್ ಕೋಡ್ ಮಾತ್ರ ಒಳಗೊಂಡ ಆಧಾರ್ ಕಾರ್ಡ್ ಪರಿಚಯಿಸಲು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಯೋಜಿಸುತ್ತಿದೆ. ಆಧಾರ್ ದುರುಪಯೋಗ ತಡೆಯಲು, ದೃಢೀಕರಣ ಸುಗಮಗೊಳಿಸಿ ಗೌಪ್ಯತೆ ಹೆಚ್ಚಿಸುವುದು ಉದ್ದೇಶ ಎಂದು ಯುಐಡಿಎಐ ತಿಳಿಸಿದೆ.
ಆಫ್‌ಲೈನ್ ಪರಿಶೀಲನೆಗೆ ಆಧಾರ್ ಬಳಕೆ, ಸಂಗ್ರಹಣೆಯನ್ನು ಆಧಾರ್ ಕಾಯ್ದೆ ನಿಷೇಧಿಸಿದ್ದರೂ, ನಕಲು ಪ್ರತಿಗಳನ್ನು ಪಡೆಯುವುದು ಮುಂದುವರಿದಿದ್ದು, ಹಾಗಾಗಿ ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಆಧಾರ್ ಮೂಲಕ ವಯಸ್ಸಿನ ದಾಖಲೆ ದೃಢೀಕರಿಸಬೇಕಾದ ಸಿನೆಮಂದಿರ, ಕ್ಲಬ್ ಮುಂತಾದ ಸ್ಥಳಗಳಲ್ಲಿ ವಯಸ್ಸು ಪರಿಶೀಲಿಸಬಲ್ಲ ಹೊಸ ಆ್ಯಪ್ ಅಭಿವೃದ್ಧಿಪಡಿಸುತ್ತಿರುವುದಾಗಿ ಯುಐಡಿಎಐ ತಿಳಿಸಿದೆ.
