Channapattana: ಲೋಕಸಭಾ ಚುನಾವಣೆಯಲ್ಲಿ ಹಾಗೂ ಮುಂಗುಸಿಯಂತಿದ್ದ ಡಿಕೆ ಸುರೇಶ್ ಹಾಗೂ ಸಿಪಿ ಯೋಗೇಶ್ವರ್ ಅವರು ಇದೀಗ ದೋಸ್ತಿಗಳಾಗಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಲು ಮುಖ್ಯ ಕಾರಣ ಡಿಕೆ ಸುರೇಶ ಅವರು. ಹೀಗಾಗಿ ಈಗ ಎಲ್ಲಾ ಕಡೆ ಇಬ್ಬರೂ ದೋಸ್ತಿಗಳು ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಅಂತೆಯೇ ಇದೀಗ ಜಲಾಶಯದಲ್ಲಿ ವಾಟರ್ ಬೈಕ್ ರೈಡ್ ಗೆ ಮುಂದಾದ ಡಿ.ಕೆ.ಸುರೇಶ್ ಮತ್ತು ಚೆನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಇಬ್ಬರು ನಾಯಕರು ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.
ಹೌದು, ರಾಮನಗರದ ಚನ್ನಪಟ್ಟಣ ತಾಲೂಕಿನಲ್ಲಿರುವ ಕಣ್ವ ಜಲಾಶಯದಲ್ಲಿ ಬೋಟಿಂಗ್ ಮಾಡ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಒಂದೇ ಬೈಕ್ ನಲ್ಲಿ ಇಬ್ಬರು ವಾಟರ್ ರೈಡ್ ತೆರಳಿದ್ದಾಗ ಆಯತಪ್ಪಿ ಸುರೇಶ್, ಸಿಪಿವೈ ನೀರಿಗೆ ಬಿದ್ದಿದ್ದಾರೆ. ಈ ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತಾದರೂ, ಅಷ್ಟರಲ್ಲಿ ಲೈಫ್ ಜಾಕೆಟ್ ಧರಿಸಿದ್ದ ಕಾರಣ ಉಭಯ ನಾಯಕರು ಸರಾಗವಾಗಿ ಈಜಿಕೊಂಡು ಬಂದು ದಡ ಸೇರಿದ್ದಾರೆ.
ಇನ್ನು ಕಣ್ವ ಜಲಾಶಯದಲ್ಲಿ ಬೋಟ್ ರೈಡಿಂಗ್ ಕುರಿತಂತೆ ಡಿಕೆ ಸುರೇಶ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ರೈಡಿಂಗ್ ಕಣ್ಣು ಹಾಯಿಸಿಷ್ಟು ದೂರ ಸ್ಫಟಿಕದಂತೆ ಹೊಳೆಯುತ್ತಿರುವ ನೀರು, ಪ್ರಕೃತಿಯ ಹೊದಿಕೆಯಲ್ಲಿ, ಪ್ರಶಾಂತ ವಾತಾವರಣದಲ್ಲಿರುವ ನಮ್ಮ ರಾಮನಗರ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ ಕಣ್ವ ಜಲಾಶಯ. ಇಂದು ಸಹೋದರ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಶಾಸಕರಾದ ಸಿಪಿ ಯೋಗೇಶ್ವರ್ ಅವರೊಂದಿಗೆ ಬೋಟಿಂಗ್ ವಿಹಾರ ಕೈಗೊಂಡಿದ್ದು ಒಂದು ವಿಶಿಷ್ಟ ಅನುಭೂತಿಯಾಗಿತ್ತು ಅಂತ ಹೇಳಿದ್ದಾರೆ.
