Siddaramaiah: ಕಳೆದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅತಿ ವಿವಾದಿತ ಮತ್ತು ಪ್ರಚೋದಿತ `ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ 2021 (ಗೋ ಹತ್ಯೆ ನಿಷೇಧ ಕಾಯ್ದೆ) ಹಾಗೂ ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ 2021 (ಮತಾಂತರ ನಿಷೇಧ ಕಾಯ್ದೆ) ಅನ್ನು ವಾಪಸ್ ಪಡೆಯುವ ಬಗ್ಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಗಾಟದ ವಿಚಾರದಲ್ಲಿ ನಡೆದಿರುವ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಾಯಕರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ನಿಯೋಗ ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.ಮನವಿ ಪತ್ರದಲ್ಲಿ, ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಉಂಟಾಗಿದ್ದು, ಗೋ ಸಾಗಾಟಗಾರರ ಮೇಲೆ ಪೊಲೀಸರು ಶೂಟೌಟ್ ಮಾಡುವುದು, ಅವರ ಮನೆ ಮುಗ್ಗಟ್ಟುಗಳನ್ನು ಜಪ್ತಿ ಮಾಡುವುದು ಮುಂತಾದ ಕಳವಳಕಾರಿ ಘಟನೆಗಳು ನಡೆದಿರುತ್ತದೆ. ಈ ಕರಾಳ ಕಾನೂನಿಂದಾಗಿ ರೈತರು ತಾವು ಬೆಳೆಸಿದ ಜಾನುವಾರಗಳನ್ನು ಮಾರಾಟ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ ಎಂದು ವಿವರಿಸಿದರು.
ಅದೇ ರೀತಿ, ಕರ್ನಾಟಕ ಧರ್ಮ ಸಂರಕ್ಷಣಾ ಕಾಯ್ದೆಯ ನೆಪದಲ್ಲಿ ಸಂಘಪರಿವಾರದವರು ಅಲ್ಪಸಂಖ್ಯಾತರ ಮೇಲೆ ನಿರಂತರ ದೌಜನ್ಯವನ್ನು ನಡೆಸುತ್ತಿದ್ದಾರೆ. ಸಂವಿಧಾನಬದ್ಧವಾಗಿ ಪ್ರತಿಯೊಬ್ಬರಿಗೂ ಅವರಿಗೆ ಬೇಕಾದ ಧರ್ಮವನ್ನು ಯಾವುದೇ ಒತ್ತಡವಿಲ್ಲದೆ ಅನುಸರಿಸಲು ಅವಕಾಶಗಳು ಇರುವಾಗ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ಚಾಲ್ತಿಯಲ್ಲಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ದೂರು ನೀಡಿದ್ದಾರೆ.ರಾಜ್ಯದ ಬಹುಪಾಲು ಜನರು ಈ ಎರಡು ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿದ್ದರು. 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದು ವರ್ಷದ ಒಳಗೆ ಈ ಕರಾಳ ಹಾಗೂ ಜನವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಆಶ್ವಾಸನೆ ನೀಡಿತ್ತು. ಕೊಟ್ಟ ಮಾತಿನಂತೆ ಈ ಎರಡು ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ನಿಯೋಗದಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ, ಮಾಜಿ ಸಚಿವ ರಮಾನಾಥ ರೈ, ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ಜೆ.ಆರ್ ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಪದ್ಮರಾಜ್ ಪೂಜಾರಿ, ರಕ್ಷಿತ್ ಶಿವರಾಂ, ಎಂ.ಎಸ್ ಮಹಮ್ಮದ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರಾದ ನೂರುದ್ದೀನ್ ಸಾಲ್ಮರ, ಮಾಜಿ ಮೇಯರ್ ಅಶ್ರಫ್, ಅಲ್ವಿನ್ ಪ್ರಕಾಶ್, ಶಾಲೆಟ್ ಪಿಂಟೋ, ಚಾರ್ಮಾಡಿ ಹಸನಬ್ಬ, ಅಬ್ದುಲ್ ಜಲೀಲ್ ಕೃಷ್ಣಾಪುರ, ಹೈದರಾಲಿ, ಹಬೀಬುಲ್ಲಾ ಕಣ್ಣೂರು, ಟಿ.ಹೆಚ್ ಮೊಹಿದ್ದೀನ್, ರಫೀಕ್ ಕಣ್ಣೂರು, ಅಶ್ರಫ್ ಬಜಾಲ್, ವಿಕ್ಕಿ ಸಿಂಗ್, ಕರೀಂ ಗೇರುಕಟ್ಟೆ, ಮುಸ್ತಫಾ ಸುಳ್ಯ, ಸಂಶುದ್ದೀನ್ ಸುಳ್ಯ, ಸಮದ್ ಸೋಂಪಾಡಿ, ಇಲ್ಯಾಸ್, ಕಾಜೂರು ದರ್ಗಾ ಸಮಿತಿ ಅಧ್ಯಕ್ಷ ಯು.ಕೆ ಇಬ್ರಾಹಿಂ ಮತ್ತು ಕಾರ್ಯದರ್ಶಿ ಸಿದ್ದೀಕ್ ಕಾಜೂರು ಉಪಸ್ಥಿತರಿದ್ದರು.
