ಸಿನಿಮಾ ರಂಗದಲ್ಲೇ ಹೊಸ ದಾಖಲೆ ಬರೆದ ‘ಕಾಂತಾರ’, ಕರ್ನಾಟಕ ಮಾತ್ರವಲ್ಲದೆ ಇಡಿ ದೇಶವೇ ಬಹುಪರಾಕ್ ಹೇಳಿದೆ. ಸಿನಿಮಾದ ವಿಚಾರವಾಗಿ ಅನೇಕ ವಿವಾದಗಳು ನಡೆದಿವೆ. ಯಶಸ್ಸಿನ ಬೆನ್ನಲ್ಲೇ ‘ವರಾಹ ರೂಪಂ’ ಹಾಡಿನ ವಿವಾದ ಕಾಂತಾರದ ಬೆನ್ನಿಗೇರಿತ್ತು. ಇದರ ಜೊತೆಗೆ “ಆ ದಿನಗಳ” ನಟ ಚೇತನ್ ಕುಮಾರ್, ಸಾಹಿತಿ ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಕೆಲವರು ಕಾಂತಾರದ ಬಗ್ಗೆ ಕಿರಿಕ್ ತೆಗೆದಿದ್ದರು. ಇದೀಗ ಮತ್ತೆ ಇದೇ ಚಿತ್ರದ ಬಗ್ಗೆ ಚೇತನ್ ಅಹಿಂಸಾ ರಿಷಬ್ ಶೆಟ್ಟಿ ವಿರುದ್ಧ ಗರಂ ಆಗಿ ಮಾತನಾಡಿದ್ದಾರೆ.
ಸಿನಿಮಾದಲ್ಲಿ ಪಂಜುರ್ಲಿ ದೈವದ ‘ಓ…’ ಎನ್ನುವ ಕೂಗು ಬಹಳ ಫೇಮಸ್ ಆಗಿತ್ತು. ಆದರೆ ಅದನ್ನು ಅನುಕರಿಸಬೇಡಿ ಅಂತ ಖುದ್ದು ರಿಷಬ್ ಶೆಟ್ಟಿ ಅವರೇ ಮನವಿ ಮಾಡಿದ್ದರು. ದೈವ ಆಕರ್ಷಣೆ ಆದಾಗ ಮಾಡುವ ಕೂಗನ್ನು ಯಾರೂ ಅನುಕರಣೆ ಮಾಡಬೇಡಿ. ದೈವಾರಾಧನೆ ಒಂದು ಆಚಾರಣೆಯ ಭಾಗವಾಗಿದ್ದು, ಅದು ನಂಬಿಕೆಯ ಸಂಗತಿ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು? ಎತ್ತ ಎಂದು ತಿಳಿದು ಅದನ್ನು ವ್ಯವಹರಿಸಬೇಕು ಎಂದು ಹೇಳಿದ್ದಾರೆ.
ದೈವದಂತೆ ಕೂಗು ಹಾಕುವುದನ್ನು ಯಾರೂ ರೀಲ್ಸ್ ಮಾಡಬೇಡಿ. ಇದೆಲ್ಲ ಬಹಳ ನೋವು ತರುವಂತಹ ವಿಚಾರಗಳಾಗಿದ್ದೂ, ಇದನ್ನು ನಂಬಿದವರಿಗೆ ಹಾಗೂ ದೈವಾರಾಧಕರಿಗೆ ಬಹಳಷ್ಟು ನೋವು ತರುತ್ತದೆ. ನಂಬಿರುವ ನಮ್ಮಂತಹ ಭಕ್ತರಿಗೂ ನೋವು ತರುತ್ತದೆ. ಹೀಗಾಗಿ ಯಾರೂ ಅದನ್ನು ಅನುಕರಿಸಬೇಡಿ ಅಂತ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೇತನ್, ತಮ್ಮದೇ ದಾಟಿಯಲ್ಲಿ ರಿಷಬ್ ಶೆಟ್ಟಿಗೆ ಟಾಂಗ್ ಕೊಟ್ಟಿದ್ದಾರೆ. ಆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡು, ನೀವು ಮಾಡಿದ್ದೆಷ್ಟು ಸರಿ ಎಂದಿದ್ದಾರೆ.
‘ಕೋಟಿಗಟ್ಟಲೇ ದುಡ್ಡು ಮತ್ತು ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು, ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವೈಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ. ನೀವು ಅದನ್ನು ತೋರಿಸಬಹುದಾದರೆ, ಇತರರು ಕೂಡ ತೋರಿಸಬಹುದು. ಪ್ರಜಾಪ್ರಭುತ್ವಕ್ಕೆ ಸ್ವಾಗತ..’ ಎಂದು ಪೋಸ್ಟ್ ಹಾಕಿದ್ದಾರೆ.
