ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜಧಾನಿಗೆ ಮಾತ್ರ ಅನ್ವಯವಾಗುವಂತೆ ವಿಶೇಷ ಸಾಂದರ್ಭಿಕ ಅಬಕಾರಿ ಸನ್ನದುದಾರರಿಗೆ (ಸಿವಿಲ್-5) ಬುಧವಾರ (ಡಿ.31) ಬೆಳಗ್ಗೆ 6 ಗಂಟೆಯಿಂದ ತಡರಾತ್ರಿ 1ರವರೆಗೆ ಮದ್ಯದ ವಹಿವಾಟು ಮತ್ತು ಮದ್ಯ ಸೇವನೆಗೆ ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವಿಶೇಷ ಸಾಂದರ್ಭಿಕ ಅಬಕಾರಿ ಸನ್ನದುದಾರರಿಗೆ (ಸಿಎಲ್-5) ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 10.30 ರಿಂದ ರಾತ್ರಿ 12 ರವರೆಗೆ ಮಾತ್ರ ಮದ್ಯದ ವಹಿವಾಟು ನಡೆಸಲು ಅವಕಾಶವಿದೆ. ಆದರೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31 ರಂದು ಬೆಳಗ್ಗೆ 6 ಗಂಟೆಯಿಂದ ತಡರಾತ್ರಿ 1 ರವರೆಗೆ ಮದ್ಯದ ವಹಿವಾಟು ನಡೆಸಲು ಅನುಮತಿ ನೀಡಿ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ಸಿಎಲ್-5, ರಾಜ್ಯದಲ್ಲಿ ಅಬಕಾರಿ ಇಲಾಖೆ ನೀಡುವ ತಾತ್ಕಾಲಿಕ್ (ಸಾಂದರ್ಭಿಕ) ಮದ್ಯದ ಸನ್ನದು (ಲೈಸೆನ್ಸ್) ಆಗಿದೆ. ಮದುವೆ, ಹುಟ್ಟುಹಬ್ಬ ಆಚರಣೆ, ಬೀಗರೂಟ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮದ್ಯ ಬಳಕೆಗೆ ಸಿಎಲ್-5 ತಾತ್ಕಾಲಿಕ ಸನ್ನದು ಅಗತ್ಯ. ಈ ಸನ್ನದು ಕೇವಲ ಒಂದು ದಿನಕ್ಕೆ (24 ತಾಸು) ಮಾನ್ಯವಾಗಿರುತ್ತದೆ.
ಇದು ಮುಖ್ಯವಾಗಿ ಖಾಸಗಿ ಪಾರ್ಟಿಗಳು, ಕಾರ್ಯಕ್ರಮಗಳು ಅಥವಾ ನಿರ್ದಿಷ್ಟ ದಿನದಂದು ನಡೆಯುವ ಸಮೃಂಭಗಳಿಗೆ ಮದ್ಯ ಮಾರಾಟ ಮಾಡಲು ಅಥವಾ ಪೂರೈಸಲು ಅನುಮತಿ ನೀಡುತ್ತದೆ. ಈ ಲೈಸೆನ್ಸ್ ಹೊಂದಿರುವವರಿಗೆ ಸಾಮಾನ್ಯವಾಗಿ ಹೊಸ ವರ್ಷದಂತಹ ವಿಶೇಷ ಸಂದರ್ಭಗಳಲ್ಲಿ ಒಂದು ದಿನ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತದೆ. ಸಿಎಲ್-5 ಸನ್ನದುದೃರು ಅಬಕಾರಿ ಇಲಾಖೆ ನಿಯಮಗಳ ಪ್ರಕಾರವೇ ಮದ್ಯದ ಸರಕು ಖರೀದಿಸಬೇಕು ಮತ್ತು ಮಾರಾಟ ಮಾಡಬೇಕು.
