ಬೆಂಗಳೂರು: ನಿಧಿ ಆಸೆಗಾಗಿ ಮಗುವನ್ನು ಬಲಿ ಕೊಡಲು ದತ್ತು ಪೋಷಕರು ಯತ್ನ ಮಾಡಿದ ಆರೋಪದ ಕುರಿತು ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸುಲಿಬೆಲೆಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಮನೆಯಲ್ಲಿಯೇ ಗುಂಡಿ ತೆಗೆದು ಮಗುವನ್ನು ಬಲಿ ಕೊಡಲು ಪೂಜೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಮನೆಯ ಮೇಲೆ ದಾಳಿ ಮಾಡಿ ಎಂಟು ತಿಂಗಳ ಗಂಡು ಮಗುವನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಸೈಯದ್ ಇಮ್ರಾನ್ ಎನ್ನುವವರ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ಮಾಡಲಾಗುತ್ತಿತ್ತು.
ಬೇರೆಯವರಿಂದ ಗಂಡು ಮಗುವನ್ನು ಖರೀದಿ ಮಾಡಿದ್ದು, ಹುಣ್ಣಿಮೆ ಹಿನ್ನೆಲೆ ಮಗುವನ್ನು ಬಲಿ ಕೊಡುತ್ತಿದ್ದಾರೆ ಎಂದು ಅಪರಿಚಿತರು ಕರೆ ಮಾಡಿದ್ದರು. ಸಹಾಯವಾಣಿಗೆ ಕರೆ ಬಂದ ಮಾಹಿತಿಯನ್ನು ಆಧರಿಸಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಮನೆಯ ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿದ್ದು ಪತ್ತೆಯಾಗಿದೆ. ಮಗುವನ್ನು ಶಿಶು ಕೇಂದ್ರಕ್ಕೆ ರವಾನಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಯಿಂದ ಬಲಿ ಪೂಜೆ ಆರೋಪದ ಕುರಿತು ತನಿಖೆ ಮಾಡಲಾಗುತ್ತಿದೆ.
ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
