Helmet: ಸಾಮಾನ್ಯವಾಗಿ ಜನರು ಬೈಕ್, ಸ್ಕೂಟರ್ ಇದರಲ್ಲೆಲ್ಲಾ ಚಲಿಸುವಾಗ ಹೆಲ್ಮೆಟ್ ಧರಿಸೋದೇ ವಿರಳ. ಪೊಲೀಸರು ಒಂದಷ್ಟು ದೂರದಲ್ಲಿ ಕಂಡರೆ ಸಾಕು ಕೈಯಲ್ಲಿದ್ದ ಹೆಲ್ಮೆಟ್ (Helmet) ತಲೆಗೆ ಬರುತ್ತೆ. ಬಹುಶಃ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಇನ್ನೊಬ್ಬರು ನೆನಪಿಸಬೇಕೇನೋ. ಹೀಗೇ ಹೆಲ್ಮೆಟ್ ಧರಿಸದೆ ಹೋದರೆ ಅಪಘಾತದಲ್ಲಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಹೆಲ್ಮೆಟ್ ಜೀವ ರಕ್ಷಾ ಕವಚ ಎಂಬ ಮಾಹಿತಿಯ ಅರಿವು ಮೂಡಿಸಿದರು ಕೂಡ ಧರಿಸದೆ ಓಡಾಡುವ ಟ್ರಾಫಿಕ್ ನಿಯಮ ಉಲ್ಲಂಘಿಸಿ ಅಪಾಯಕ್ಕೆ ಆಹ್ವಾನ ಮಾಡಿಕೊಡುವ ನಿದರ್ಶನ ಕೂಡ ನಮ್ಮ ಕಣ್ಣ ಮುಂದೆಯೇ ಇದೆ. ಇನ್ನು ಜೀವ ರಕ್ಷಣೆಯ ಹೆಲ್ಮೆಟ್ ಖರೀದಿಸುವಾಗ ಈ ವಿಚಾರ ಗಮನದಲ್ಲಿರಲಿ !.
ಹೊಸ ಹೆಲ್ಮೆಟ್ ಖರೀದಿಸುವಾಗ ನೀವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪ್ರಮಾಣೀಕರಣ. ಭಾರತದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಎಲ್ಲಾ ದ್ವಿಚಕ್ರ ವಾಹನ ಸವಾರರಿಗೆ ಐಎಸ್‌ಐ ಗುರುತು ಹೊಂದಿರುವ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ದೇಶದಲ್ಲಿ ತಯಾರಾಗುವ ಯಾವುದೇ ಹೆಲ್ಮೆಟ್‌ನ ಹಿಂಭಾಗದಲ್ಲಿ ಅಥವಾ ಬದಿಯಲ್ಲಿ ಐಎಸ್‌ಐ ಮುದ್ರೆ ಇರುತ್ತದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಎಲ್ಲಾ ಹೆಲ್ಮೆಟ್‌ಗಳನ್ನು ವಿವಿಧ ಪರೀಕ್ಷೆಗೆ ಒಳಪಡಿಸುತ್ತದೆ. ಆ ನಂತರವೇ
ಐಎಸ್‌ಐ ಮಾರ್ಕ್‌ನೊಂದಿಗೆ ಪ್ರಮಾಣೀಕರಿಸುತ್ತದೆ. ಐಎಸ್‌ಐ ಪ್ರಮಾಣೀಕರಣದ ಗುರುತು ಇಲ್ಲದ ಹೆಲ್ಮೆಟ್‌ಗಳು ಸುರಕ್ಷಿತ ಎಂದು ಹೇಳಲಾಗುವುದಿಲ್ಲ. ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್‌ಗಳು ಜೀವಕ್ಕೆ ಅಪಾಯ ತರಬಹುದು. ಆದ್ದರಿಂದ ಇಂತಹ ಹೆಲ್ಮೆಟ್‌ಗಳನ್ನು ಖರೀದಿಸಬೇಡಿ. ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಖರೀದಿಸಿ!.
ಅಧಿಕ ಹಣ ಕೊಟ್ಟರೂ ಪರವಾಗಿಲ್ಲ ಗುಣಮಟ್ಟದ ಹೆಲ್ಮೆಟ್ ಖರೀದಿಸಿ. ಹೆಲ್ಮೆಟ್ ಉತ್ತಮ ಗುಣಮಟ್ಟದಾಗಿದ್ದರೆ ಜೀವ ರಕ್ಷಣೆ ಒದಗಿಸುತ್ತದೆ. ಅಗತ್ಯವಾದ ರಕ್ಷಣೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿರುವ ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್ ಖರೀದಿಸುವುದು ಮುಖ್ಯ. ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಅಪಘಾತದ ಸಂದರ್ಭದಲ್ಲಿ ರಕ್ಷಣೆ ಒದಗಿಸುವಲ್ಲಿ ವಿಫಲವಾಗುತ್ತದೆ. ಹಾಗಾಗಿ ಉತ್ತಮ ಬ್ರ್ಯಾಂಡ್‌ನ ಗುಣಮಟ್ಟದ ಹೆಲ್ಮೆಟ್ ಖರೀದಿಸುವುದು ಉತ್ತಮ.
ಮುಖ್ಯವಾಗಿ ಹೆಲ್ಮೆಟ್ ನಿಮ್ಮ ತಲೆಗೆ ಫಿಟ್ ಆಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ತಲೆಗೆ ಸರಿ ಹೊಂದುವ ಹೆಲ್ಮೆಟ್‌ಗಳ ಆಯ್ಕೆಯೂ ಮುಖ್ಯ. ಹೆಲ್ಮೆಟ್ ನಿಮ್ಮ ತಲೆಗೆ ಬಿಗಿಯಾಗಿ ಮತ್ತು ಸರಿಯಾಗಿ ಹೊಂದಿಕೊಳ್ಳಬೇಕು. ಸಡಿಲವಾದ ಹೆಲ್ಮೆಟ್‌ನಿಂದ ಅಪಾಯಕಾರಿ ಸನ್ನಿವೇಶಗಳಲ್ಲಿ ಸುರಕ್ಷತೆಗಿಂತ ಅಪಾಯವೇ ಹೆಚ್ಚು. ಹೀಗಾಗಿ ಹೆಲ್ಮೆಟ್ ಖರೀದಿಸುವಾಗ ಹೆಲ್ಮೆಟ್ ಧರಿಸಿ ನಿಮ್ಮ ತಲೆಯನ್ನು ಸರಿಹೊಂದುತ್ತದೆಯೇ? ನೋಡಿ. ಸಡಿಲವಾದರೆ ಫಿಟ್ ಆಗದೇ ಇದ್ದರೆ ಖರೀದಿಸಬೇಡಿ. ಸಡಿಲವಾಗದಂತೆ ಸರಿಯಾಗಿ ತಲೆಗೆ ಸುರಕ್ಷತೆ ನೀಡುವ ಹೆಲ್ಮೆಟ್ ಖರೀದಿಸಿ.
ಸರಿಯಾದ ಪ್ರಕಾರದ ಹೆಲ್ಮೆಟ್ ಆರಿಸುವುದು ಮುಖ್ಯ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹೆಲ್ಮೆಟ್‌ಗಳು ಲಭ್ಯವಿವೆ. ಹಾಫ್ ಫೇಸ್ ಹೆಲ್ಮೆಟ್, ಮಾಡ್ಯುಲರ್ ಹೆಲ್ಮೆಟ್, ಆಫ್ ರೋಡ್ ಹೆಲ್ಮೆಟ್‌ಗಳು, ಫುಲ್ ಫೇಸ್ ಹೆಲ್ಮೆಟ್‌ಗಳು ಹೀಗೆ ಸಾಕಷ್ಟು ರೀತಿಯ ಹೆಲ್ಮೆಟ್‌ಗಳು ಸಿಗುತ್ತವೆ. ಇವುಗಳಲ್ಲಿ ಸರಿಯಾದ ಪ್ರಕಾರದ ಹೆಲ್ಮೆಟ್ ಆರಿಸಿ. ಹೀಗೆ ನಿಮಗೆ ಬೇಕಾದ ಮಾದರಿಯ ಹೆಲ್ಮೆಟ್ ಆರಿಸಿಕೊಂಡ ಬಳಿಕ ನಿಮಗೆ ಇಷ್ಟವಾಗುವಂತಹ ವಿನ್ಯಾಸ ಮತ್ತು ಬಣ್ಣದ ಹೆಲ್ಮೆಟ್‌ಗಳನ್ನು ಆರಿಸಿಕೊಳ್ಳಿ.
