Anjanadri: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳವೆಂದೆ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿನಿತ್ಯವೂ ಭಕ್ತಾ ಅಭಿಮಾನಿಗಳು ಆಗಮಿಸಿ ಆಂಜನೇಯನ ದರ್ಶನ ಪಡೆಯುತ್ತಾರೆ. ವಿಶ್ವ ಪರಂಪರೆಯ ತಾಣ ಹಂಪಿಯ ಪಕ್ಕದಲ್ಲಿ ಈ ಕ್ಷೇತ್ರವಿರುವುದರಿಂದ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಬೃಹದಾಕಾರವಾಗಿರುವ ಈ ಕಲ್ಲಿನ ಬೆಟ್ಟವನ್ನು ಹತ್ತಲು ಒಬ್ಬ ಮನುಷ್ಯನಿಗೆ ಸುಮಾರು ಅರ್ಧ ಗಂಟೆಯಾದರೂ ಸಮಯ ಬೇಕಾಗುತ್ತದೆ. ಕಟ್ಟು ಮಸ್ತಾಗಿದ್ದರೆ ಕೆಲವರು ಇಪ್ಪತ್ತು ನಿಮಿಷಗಳಲ್ಲಿಯೂ ಹತ್ತುವುದುಂಟು. ಆದರೆ ಇಲ್ಲೊಬ್ಬಳು ಕೇವಲ 8 ನಿಮಿಷ 54 ಸೆಕೆಂಡ್ ನಲ್ಲಿ ಅಂಜನಾದ್ರಿ ಬೆಟ್ಟವನ್ನು ಏರಿ ದಾಖಲೆ ಮಾಡಿದ್ದಾಳೆ. ಇದರಲ್ಲಿ ಏನಪ್ಪಾ ವಿಶೇಷತೆ ಅಂದುಕೊಳ್ಳಬೇಡಿ. ಯಾಕೆಂದರೆ ಆಕೆ ಸಾಮಾನ್ಯವಾಗಿ ನಡೆದುಕೊಂಡು ಮೆಟ್ಟಿಲೇರುರುತ್ತಾ ಬೆಟ್ಟ ಹತ್ತಿದ್ದು ಅಲ್ಲ. ಬದಲಿಗೆ ಬೆಟ್ಟದ ಅಡಿಯಿಂದ ಮುಡಿಯವರೆಗೂ ಭರತನಾಟ್ಯ ಮಾಡಿಕೊಂಡೆ ಅಂಜನಾದ್ರಿಯನ್ನು ಏರಿದ್ದಾಳೆ.
ಯಸ್, ಹರ್ಷಿತಾ ಎಂಬ ಯುವತಿ ಭರತನಾಟ್ಯ ಮಾಡಿಕೊಂಡು ಅತಿ ವೇಗ ಅಂಜನಾದ್ರಿ ಬೆಟ್ಟವನ್ನು ಏರಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹರ್ಷಿತಳು ಭರತನಾಟ್ಯದ ವೇಷ ಭೂಷಣಗಳನ್ನು ತೊಟ್ಟು, ವಿವಿಧ ಭಂಗಿಯಲ್ಲಿ ನೃತ್ಯವನ್ನು ಮಾಡುತ್ತಾ ಬೆಟ್ಟಗಿರುವುದನ್ನು ಕಾಣಬಹುದು. ಕೆಲವು ಯುವಕರು ಆಕೆಯ ಹಿಂದೆ ಬರುತ್ತಾ ಅವಳಿಗೆ ಬೆಂಬಲವನ್ನು ನೀಡುತ್ತಿರುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಇದೀಗ ಹರ್ಷಿತಾಳ ಸಾಧನೆಗೆ ಅನೇಕರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
