Shivamogga: ಜನಿವಾರ ಹಾಕಿದ್ದನೆಂಬ ಕಾರಣಕ್ಕಾಗಿ ಬ್ರಾಹ್ಮಣ ವಿದ್ಯಾರ್ಥಿ ಒಬ್ಬನಿಗೆ ಸಿಇಟಿ ಪರೀಕ್ಷೆ ಬರೆಯಲು ಬಿಡದೆ ಮನೆಗೆ ವಾಪಸ್ ಕಳಿಸಿದ್ದ ಅಘಾತಕಾರಿ ಪ್ರಕರಣ ಒಂದು ಬೀದರ್ ನಲ್ಲಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮತ್ತೆ ಇಂಥದ್ದು ಒಂದು ಘಟನೆ ನಡೆದಿದ್ದು ಬ್ರಾಹ್ಮಣ ವಿದ್ಯಾರ್ಥಿಯೊಬ್ಬನಿಗೆ ಬಲವಂತವಾಗಿ ಜನಿವಾರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿರುವ ಪ್ರಕರಣ ಮುನ್ನಲೆಗೆ ಬಂದಿದೆ.
ಹೌದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಎರಡನೇ ದಿನದ ಸಿಇಟಿ ಪರೀಕ್ಷೆಗೆ ಬಂದ ವಿದ್ಯಾರ್ಥಿಯೋರ್ವನಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರ ತೆಗೆದಿಟ್ಟು ಪರೀಕ್ಷಾ ಕೇಂದ್ರಕ್ಕೆ ಹೋಗುವಂತೆ ಹೇಳಿದ್ದಾರೆ.
ಆದರೆ ವಿದ್ಯಾರ್ಥಿ ಇದು ಗಾಯತ್ರಿ ದೀಕ್ಷೆಪಡೆದು ಹಾಕಿರುವ ಜನಿವಾರ ಇದನ್ನು ತೆಗೆಯುವುದಿಲ್ಲ ಎಂದು ಹೇಳಿದ್ದಾನೆ. ಜನಿವಾರ ತೆಗೆಯದಿದ್ದರೆ ಪರೀಕ್ಷಾ ಕೇಂದ್ರಕ್ಕೆ ಬಿಡಲ್ಲ ಎಂದಿದ್ದಾರೆ. ವಿದ್ಯಾರ್ಥಿ ಸಾಕಷ್ಟು ಬಾರಿ ಕೇಳಿಕೊಂಡರೂ ಒಪ್ಪದ ಸಿಬ್ಬಂದಿಗಳು ಬಲವಂತವಾಅಗಿ ವಿದ್ಯಾರ್ಥಿಯಿಂದ ಜನಿವಾರ ಹಾಗು ಆತನ ಕೈಲಿದ್ದ ಕಾಶಿದಾರವನ್ನು ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಈ ಕುರಿತು ಬ್ರಾಹ್ಮಣ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ. ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕಿತ್ತು ಹಾಕಿ ಅವಮಾನ ಮಾಡಲಾಗಿದೆ. ಇದರ ಬಗ್ಗೆ ಸ್ಥಳಕ್ಕೆ ಆಗಮಿಸಿದ ಬ್ರಾಹ್ಮಣ ಸಂಘಟನೆಗಳು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೇರೆ ಸಮುದಾಯದವರಾಗಿದ್ದರೆ ಈ ರೀತಿ ಮಾಡಲು ಬಿಡುತ್ತಿದ್ದಿರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ, ಬೀದರ್ ನ ಬ್ರಾಹ್ಮಣ ಸಂಘಟನೆಗಳು ಈ ಬಗ್ಗೆ ದೂರು ದಾಖಲಿಸಿವೆ. ಇದಾದ ಬಳಿಕ ಪ್ರತಿಕ್ರಿಯಿಸಿರುವ ಕೆಇಎ ಅಧಿಕಾರಿಗಳು ವರದಿ ಪಡೆಯುವುದಾಗಿ ಸ್ಪಷ್ಟನೆ ನೀಡಿದ್ದಾರೆ.
