ಹಿಂದೂ ಧರ್ಮಗ್ರಂಥಗಳಲ್ಲಿ, ಪೂಜೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೆ ಹೆಚ್ಚಿನ ಮಹತ್ವವಿದೆ. ದೇವರಪೂಜೆ ಕಾರ್ಯಗಳಿಗೆ ನಾವು ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೋ ಹಾಗೇ ದೇವರ ಪೂಜೆ ಕಾರ್ಯಗಳಲ್ಲಿ ಬಳಸುವಂತಹ ವಸ್ತುಗಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ಪೂಜಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮವನ್ನು ತಪ್ಪದೆ ಪಾಲಿಸಬೇಕು. ಯಾಕಂದ್ರೆ, ಇಂತಹ ವಸ್ತುಗಳನ್ನು ಸ್ವಚ್ಛಗೊಳಿಸುವ ವಿಷಯದಲ್ಲಿ ಮಾಡುವ ತಪ್ಪುಗಳು ಜೀವನದ ಅಭಿವೃದ್ಧಿಗೆ ಮಾರಕವಾಗಬಹುದು. ಹಾಗೇ ಕೆಲವು ನಿಯಮಗಳನ್ನು ಪಾಲಿಸಿದರೆ ಉತ್ತಮವಾದ ಪ್ರಯೋಜನವೂ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಮಹಿಳೆಯರು ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ಹೀಗೇ ಮುಂತಾದ ಪ್ರಮುಖ ದಿನಗಳಲ್ಲಿ, ಪೂಜಾ ಕೊಠಡಿ ಮತ್ತು ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಪೂಜಾ ಸಾಮಾಗ್ರಿಗಳನ್ನು ಕೆಲವೊಂದು ದಿನ ಸ್ವಚ್ಛಗೊಳಿಸಬಾರದು. ಹಾಗಾದ್ರೆ ಯಾವ ದಿನದಂದು ಪೂಜಾ ಕೊಠಡಿ ಮತ್ತು ಪೂಜಾ ಸಾಮಾಗ್ರಿಗಳನ್ನು ಶುಚಿಗೊಳಿಸಬಾರದು ಎಂದು ನೋಡೋಣ.
ಶುಕ್ರವಾರ ಮತ್ತು ಮಂಗಳವಾರದಂದು ಮನೆಯನ್ನು, ಪೂಜಾ ಕೊಠಡಿಯನ್ನು ಮತ್ತು ಪೂಜಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸಬಾರದು. ಈ ದಿನದಂದು ಶುಚಿಗೊಳಿಸೋದು ತಪ್ಪು. ಯಾಕಂದ್ರೆ, ಶುಕ್ರವಾರ ಮತ್ತು ಮಂಗಳವಾರ ದೇವರ ಮನೆ ಹಾಗೂ ಪೂಜಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿದ್ರೆ ನಿಮ್ಮ ಮನೆಯಲ್ಲಿರುವ ಅದೃಷ್ಟ ಲಕ್ಷ್ಮಿ ಹೊರಹೋಗುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿನದಂದು ದೇವರ ಮನೆ, ಪೂಜಾ ಸಾಮಾಗ್ರಿಗಳನ್ನು ಶುಚಿಗೊಳಿಸದೇ ಇರೋದು ಉತ್ತಮ.
ಹಾಗೇ ಪೂಜಾ ಸಾಮಾಗ್ರಿಗಳು ಬಳಕೆಯಿಂದ ಕಪ್ಪುಬಣ್ಣಕ್ಕೆ ತಿರುಗುವುದು ಸಾಮಾನ್ಯ. ಆದರೆ ಇದಕ್ಕೆ ಪರಿಹಾರ ಇಲ್ಲಿದೆ. ಪೂಜೆಯ ಪಾತ್ರೆಗಳು ಬೇಗ ಕಪ್ಪುಬಣ್ಣಕ್ಕೆ ತಿರುಗದಂತೆ ಸ್ವಚ್ಛ ಮಾಡುವ ಸುಲಭ ವಿಧಾನ ಇಲ್ಲಿದೆ.
ಪೂಜಾ ಸಾಮಾಗ್ರಿಗಳನ್ನು ಸ್ವಚ್ಛ ಮಾಡುವ ವಿಧಾನ ಹೀಗಿದೆ :
- ಪೂಜಾ ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ನೀರು ಹಾಕಬೇಡಿ ಬದಲಾಗಿ ಮೊದಲು ಪಾತ್ರೆಯ ಎಣ್ಣೆಯ ಜಿಡ್ಡನ್ನು ಬಟ್ಟೆಯಿಂದ ಒರೆಸಿಕೊಳ್ಳಿ.
- ಎಣ್ಣೆಯ ಜಿಡ್ಡು ಹೋದ ನಂತರ, ಒಂದು ಅಗಲವಾದ ಪಾತ್ರೆಯಲ್ಲಿ ನೀರು ತೆಗೆದುಕೊಳ್ಳಿ. ಅದಕ್ಕೆ ಹುಣಸೇಹಣ್ಣು ಹಾಕಿ, ನಂತರ ನಿಮ್ಮ ಪೂಜಾ ಸಾಮಾಗ್ರಿಗಳನ್ನು ಅದರಲ್ಲಿ ಮುಳುಗಿಸಿ. ಹಾಗೂ ಅದರಲ್ಲಿ ಹುಣಸೆ ಹಣ್ಣಿನ ಪ್ರಮಾಣಕ್ಕೆ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ.
- ಬಳಿಕ ಒಂದು ಸಣ್ಣ ಬಟ್ಟಲಿನಲ್ಲಿ ಎರಡು ಚಮಚ ಹ್ಯಾಂಡ್ ವಾಶ್ ತೆಗೆದುಕೊಳ್ಳಿ. ಹಾಗೇ, 2 ಸ್ಪೂನ್ ಟೂತ್ ಪೇಸ್ಟ್ ಮತ್ತು ನಿಂಬೆರಸ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಂಬೆಯ ಹೋಳುಗಳಿಗೆ ಹಚ್ಚಿಕೊಂಡು ಪೂಜೆಯ ಸಾಮಾಗ್ರಿ ತೊಳೆಯಿರಿ. ಇಷ್ಟೇ ಪೂಜಾ ಸಾಮಾಗ್ರಿಗಳು ಶುಭ್ರವಾಗುತ್ತವೆ.
