Gujrath: ಅಲ್ ಕೈದಾ ಇಂಡಿಯನ್ ಸಬ್ ಕಂಟಿನೆಂಟ್ ಪರ ಬೆಂಗಳೂರಿನಲ್ಲಿದ್ದುಕೊಂಡು ಆನ್ಲೈನ್ ಮೂಲಕ ಜಿಹಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಮಾ ಪರ್ವೀನ್ ಅನ್ಸಾರಿಯನ್ನು ಗುಜರಾತ್ ಎಟಿಎಸ್ ಬಂಧಿಸಿದೆ. ಈಗ ತನಿಖೆಯ ವೇಳೆ ಹಲವು ಅಚ್ಚರಿ ವಿಚಾರಗಳು ಬಯಲಾಗಿದೆ.
ಹೌದು, ಬೆಂಗಳೂರಿನಲ್ಲಿ ಬಂಧಿತಳಾದ ಶಮಾ ಪರ್ವೀನ್ ಅನ್ಸಾರಿ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿ, ಮುಸ್ಲಿಂ ಪ್ರದೇಶಗಳನ್ನೆಲ್ಲ ಏಕೀಕರಿಸುವಂತೆ ಪಾಕ್ ಸೇನಾ ಮುಖ್ಯಸ್ಥ ಜ.ಅಸೀಮ್ ಮುನೀರ್‌ಗೆ ಮನವಿ ಮಾಡಿದ್ದಳು ಎಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಹೊರಬಿದ್ದಿದೆ.
ಇನ್‌ಸ್ಟಾದಲ್ಲಿ ಸುಮಾರು 10,000 ಹಿಂಬಾಲಕರನ್ನು ಹೊಂದಿದ್ದ ಈಕೆ ಪ್ರಚೋದನಕಾರಿ, ಜಿಹಾದಿ ಹಾಗೂ ಭಾರತ ವಿರೋಧಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಳು. ಭಾರತ ಪಾಕ್ ವಿರುದ್ಧ ಆಪರೇಷನ್ ಸಿಂದೂರ ಕೈಗೊಂಡ 2 ದಿನಗಳ ಬಳಿಕ, ಅಂದರೆ ಮೇ 9ರಂದು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಅನ್ಸಾರಿ, ಭಾರತದ ಮೇಲೆ ದಾಳಿ ಮಾಡುವ ಸುವರ್ಣಾವಕಾಶವನ್ನು ಬಳಸಿಕೊಳ್ಳುವಂತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ವಿನಂತಿ ಮಾಡಿದ್ದಳು ಎಂದು ಎಟಿಎಸ್ ಮಾಹಿತಿ ನೀಡಿದೆ.
ಮುನೀರ್‌ನ ಫೋಟೋ ಹಂಚಿಕೊಂಡು, ‘ನೀವು ಒಂದು ಸುವರ್ಣಾವಕಾಶ ಹೊಂದಿದ್ದೀರಿ. ಇಸ್ಲಾಮಿನ ಅನುಷ್ಠಾನ, ಮುಸ್ಲಿಂ ಪ್ರದೇಶಗಳ ಏಕೀಕರಣ ಹಾಗೂ ಹಿಂದುತ್ವ ಮತ್ತು ಯಹೂದಿ ಧರ್ಮವನ್ನು ನಿರ್ಮೂಲನೆ ಮಾಡಲು ಖಿಲಾಫತ್ ಯೋಜನೆಯನ್ನು ಸ್ವೀಕರಿಸಿ. ಮುನ್ನುಗ್ಗಿ’ ಎಂದು ಪೋಸ್ಟ್ ಮಾಡಿದ್ದಾಗಿ ಎಟಿಎಸ್ ಬಹಿರಂಗಪಡಿಸಿದೆ.
ಇನ್ನು ಎಟಿಎಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಶಮಾ ಪರ್ವೀನ್ ಅನ್ಸಾರಿ ಭಾರತ ಸರ್ಕಾರದ ವಿರುದ್ಧ ‘ಸಶಸ್ತ್ರ ಕ್ರಾಂತಿ ಅಥವಾ ಜಿಹಾದ್’ಗೆ ಕರೆ ನೀಡುವ ವಿಷಯವನ್ನು ಪ್ರಸಾರ ಮಾಡಲು ಡಿಜಿಟಲ್ ವೇದಿಕೆಗಳನ್ನು ಬಳಸುತ್ತಿದ್ದಳು. ಆಕೆಯ ಚಟುವಟಿಕೆಗಳು ಕೇವಲ ಸೈದ್ಧಾಂತಿಕ ಪ್ರಚಾರಕ್ಕಷ್ಟೇ ಸೀಮಿತವಾಗಿರಲಿಲ್ಲ. ಧಾರ್ಮಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಚೋದನಕಾರಿ ಸಂದೇಶಗಳನ್ನು ಹರಡಲು ಆಕೆ ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಬಳಸುತ್ತಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Yadagiri : ಮುಸ್ಲಿಂ ಯುವಕ ದೀಕ್ಷೆ ಪಡೆದು ಲಿಂಗಾಯತ ಮಠದ ಸ್ವಾಮಿಯಾಗಿದ್ದು ಏಕೆ ಗೊತ್ತೆ?
