Mumbai: ಮುಂಬರುವ 12ನೇ ಆವೃತ್ತಿಯ ಪ್ರೊ ಕಬಡ್ಡಿ ಆಟಗಾರರ ಹರಾಜು ಇದೀಗ ಕೊನೆಗೊಂಡಿದ್ದು, 200ಕ್ಕೂ ಹೆಚ್ಚು ಆಟಗಾರರು ವಿವಿಧ ತಂಡಗಳಿಗೆ ಸೇರಿಕೊಂಡಿದ್ದಾರೆ. ಈ ಪೈಕಿ10 ಆಟಗಾರರು ತಲಾ 1 ಕೋಟಿಗೂ ಹೆಚ್ಚು ಮೊತ್ತ ಪಡೆದಿದ್ದಾರೆ. ಹರಾಜಿನಲ್ಲಿ ಒಟ್ಟು 537.90 ಕೋಟಿ ರೂಪಾಯಿ ಹಣ ವ್ಯಯವಾಗಿದೆ.
ಮೊದಲ ದಿನ ಮೊಹಮದ್ ರೆಜಾ ಶಾದ್ಲೂ ಹಾಗೂ ದೇವಾಂಕ್ ದಲಾಲ್ 2 ಕೋಟಿ ಕ್ಲಬ್ ಗೆ ಸೇರ್ಪಡೆಗೊಂಡಿದ್ದರು. ಇನ್ನು ‘ಡಿ’ ವಿಭಾಗದಲ್ಲಿದ್ದ ಅನಿಲ್ ಮೋಹನ್ ರನ್ನು 78 ಲಕ್ಷಕ್ಕೆ ಯು ಮುಂಬಾ ಖರೀದಿಸಿದ್ದು, ಅವರು 2ನೇ ದಿನದ ಅತಿ ದುಬಾರಿ ಆಟಗಾರ ಎನಿಸಿಕೊಂಡರು. ಈಗಾಗಲೇ ತಂಡಕ್ಕೆ ರಿಟೈನ್ ಆಗಿದ್ದ ಆಟಗಾರರನ್ನು ಹೊರತುಪಡಿಸಿ ಇತರ ಆಟಗಾರರನ್ನು ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಮೊದಲ ದಿನ ಹರಾಜಾಗದೆ ಉಳಿದಿದ್ದ ಲೀಗ್‌ನ ಯಶಸ್ವಿ ಆಟಗಾರ ಪ್ರದೀಪ್ ನರ್ವಾಲ್‌ರನ್ನು 2ನೇ ದಿನವೂ ಯಾರೂ ಖರೀದಿಸಲು ಮನಸ್ಸು ಮಾಡದೇ ಇದ್ದದ್ದು ವಿಶೇಷ ಅನ್ನಿಸಿದೆ.
ಇನ್ನು ಅಶು ಮಲಿಕ್, ಅರ್ಜುನ್ ದೇಶ್ವಾಲ್ ಮತ್ತು ನವೀನ್ ಕುಮಾರ್ ರನ್ನು ಕ್ರಮವಾಗಿ 1.90 ಕೋ. ರೂ, 1.405 ಕೋ. ರೂ. ಮತ್ತು 1.20 ಕೋ. ರೂ.ಗೆ ಖರೀದಿಸಲಾಯಿತು.ಅಶು ಮಲಿಕ್ (ದಬಾಂಗ್ ಡೆಲ್ಲಿ), ದೀಪಕ್ ಸಿಂಗ್ (ಪಾಟ್ನಾ ಪೈರೇಟ್ಸ್), ಮೊಹಮ್ಮದ್ ಅಮನ್ (ಪುಣೇರಿ ಪಲ್ಟನ್), ಹರ್ದೀಪ್ ಹಾಗೂ ಘನಶ್ಯಾಮ್ ರೋಕಾ ಮರ್ಗ (ಹರಿಯಾಣ ಸ್ಟೀಲರ್ಸ್) ರನ್ನು ಇನ್ನು ಎರಡು ಋತುಗಳಿಗೆ ಹಳೆಯ ಟೀಮಿನಲ್ಲೆ ಉಳಿಸಿಕೊಳ್ಳಲಾಗಿದೆ.
ಬೆಂಗಳೂರು ಬುಲ್ಸ್‌ನಲ್ಲಿ 3 ಕನ್ನಡಿಗರು
ಸತ್ಯಪ್ಪ ಮಟ್ಟಿ ಎಂಬ ಯುವ ಆಟಗಾರರನ್ನು ಬೆಂಗಳೂರು ಬುಲ್ಸ್ 13 ಲಕ್ಷ ನೀಡಿ ಖರೀದಿಸಿತು. ಹೀಗಾಗಿ ತಂಡದಲ್ಲಿ ಕನ್ನಡಿಗ ಆಟಗಾರರ ಸಂಖ್ಯೆ ಸದ್ಯಕ್ಕೆ 3ಕ್ಕೆ ಏರಿತು. ವಿಶೇಷ ಅಂದರೆ, ಹರಾಜಿಗೂ ಮುನ್ನವೇ ಗಣೇಶ್ ಹನಮಂತ ಗೋಲ್, ‘ನ್ಯೂ ಯಂಗ್ ಪ್ಲೇಯರ್’ ಆಯ್ಕೆ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಅಲ್ಲದೆ, ಚಂದ್ರ ನಾಯ್ಕರನ್ನೂ ಹರಾಜಿಗೂ ಮುನ್ನವೇ ಖರೀದಿ ಮಾಡಿತ್ತು. ಒಟ್ಟಾರೆ ಹರಾಜಿನಲ್ಲಿ ಬುಲ್ಸ್ ತಂಡದಲ್ಲಿ 15 ಮಂದಿ ಇದ್ದು, ಬುಲ್ಸ್ ನ ಡಿಫೆಂಡರ್ ಯೋಗೇಶ್ ದಹಿಯಾ ಬರೋಬರಿ 1.125 ಕೋ. ರೂಪಾಯಿಗೆ ಹರಾಜಾಗಿ, ಭಾರತದ ಅತ್ಯಂತ ದುಬಾರಿ ಡಿಫೆಂಡರ್ ಎನಿಸಿಕೊಂಡರು.
