Automobile: ಇನ್ನು ಮುಂದೆ ಹೊಸ ಕಾರುಗಳು ಹಳೆಯ ಬಟನ್ ಫೀಚರ್ ಜೊತೆ ಬರುವ ಸಾಧ್ಯತೆಯಿದೆ. ಹೌದು. ಆರಂಭದಲ್ಲಿ ದುಬಾರಿ ಬೆಲೆಯ ಕಾರುಗಳಲ್ಲಿ ಡ್ಯಾಶ್‌ಬೋರ್ಡ್ ಉದ್ದಕ್ಕೂ ಟಚ್‌ಸ್ಕ್ರೀನ್ ಬರುತ್ತಿತ್ತು. ಆದರೆ ಈಗ ಬಜೆಟ್ ಕಾರಿನಲ್ಲೂ ಟಚ್‌ಸ್ಕ್ರೀನ್ ಸೌಲಭ್ಯವಿದೆ. ಸುಲಭವಾಗಿ ಆಪರೇಟ್ ಮಾಡಲು ಸಾಧ್ಯವಾಗುತ್ತಿದ್ದ ಕಾರಣ ಬಹಳಷ್ಟು ವಿಶೇಷತೆಗಳು ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತಿದ್ದವು. ಒಟ್ಟಿನಲ್ಲಿ ಈಗ ಡ್ಯಾಶ್‌ಬೋರ್ಡ್ ಒಂದು ಮಿನಿ ಕಂಪ್ಯೂಟರ್ ರೀತಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈಗ ಈ ಟಚ್‌ಸ್ಕ್ರೀನ್ ಚಾಲಕರಿಗೆ ಅಪಾಯಕಾರಿ ಎಂಬ ಅಧ್ಯಯನಗಳು ಪ್ರಕಟವಾದ ಬೆನ್ನಲ್ಲೇ ಕಾರು ಕಂಪನಿಗಳು ಹಳೆ ಬಟನ್ ಫೀಚರ್ ನೀಡಲು ಮುಂದಾಗಿವೆ.
ಯಾಕೆ ಈ ಬದಲಾವಣೆ?ಈ ಮೊದಲು ಬಟನ್ ಇದ್ದಾಗ ಹೆಚ್ಚಿನ ಕಮಾಂಡ್‌ಗಳನ್ನು ಸ್ಟೇರಿಂಗ್ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿದ್ದ ಬಟನ್ ಮೂಲಕ ಸುಲಭವಾಗಿ ನೀಡಬಹುದಾಗಿತ್ತು. ಆದರೆ ಟಚ್‌ಸ್ಕ್ರೀನ್‌ನಲ್ಲಿ ಈ ರೀತಿ ಸುಲಭವಾಗಿ ಕಮಾಂಡ್ ನೀಡಲು ಸಾಧ್ಯವಿಲ್ಲ. ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಬಟನ್ ಒತ್ತಬೇಕಾಗುತ್ತದೆ. ಟಚ್ ಸ್ಕ್ರೀನ್‌ನಿಂದ ಪ್ರಕ್ರಿಯೆ ನಿಧಾನವಾಗುತ್ತಿದೆ. ಇದರಿಂದಾಗಿ ಮುಂದೆ ರಸ್ತೆಯನ್ನು ನೋಡಬೇಕಾದ ಚಾಲಕನ ಗಮನ ಡ್ಯಾಶ್‌ಬೋರ್ಡ್ ಟಚ್‌ಸ್ಕ್ರೀನ್ ಕಡೆ ಹೋದಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ಕಂಪನಿಗಳು ಮರಳಿ ಹಳೆಯ ಬಟನ್ ವ್ಯವಸ್ಥೆಗೆ ಹೋಗಲು ಚಿಂತನೆ ನಡೆಸಿವೆ.
ಯಾವ ದೇಶಗಳಲ್ಲಿ ಬದಲಾವಣೆ?
ಯುರೋಪ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಈಗಾಗಲೇ ಕಾರು ತಯಾರಕಾ ಕಂಪನಿಗಳಿಗೆ ಈ ಹಿಂದೆ ಬರುತ್ತಿದ್ದಂತೆ ಬಟನ್ ನೀಡಬೇಕೆಂದು ಸೂಚಿಸಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಸ್ವತಂತ್ರ ಕಾರು ಸುರಕ್ಷತಾ ಮೌಲ್ಯಮಾಪನ ಕಾರ್ಯಕ್ರಮವಾದ ANCAP ಸೇಫ್ಟಿ, 2026 ರಿಂದ ಹೆಡ್‌ಲೈಟ್‌ಗಳು ಮತ್ತು ವಿಂಡ್‌ಸ್ಕ್ರೀನ್ ವೈಪರ್‌ಗಳು ಸೇರಿದಂತೆ ಪ್ರಮುಖ ಚಾಲಕ ನಿಯಂತ್ರಣಗಳಿಗೆ ಬಟನ್ ಫೀಚರ್ ನೀಡಬೇಕೆಂದು ಕಂಪನಿಗಳಿಗೆ ಸೂಚಿಸಿವೆ. ಅಷ್ಟೇ ಅಲ್ಲದೇ ಮತ್ತೆ ಬಟನ್ ಪರಿಚಯಿಸುವ ಕಾರುಗಳಿಗೆ ಹೆಚ್ಚಿನ ಸುರಕ್ಷತಾ ರೇಟಿಂಗ್ ನೀಡುವುದಾಗಿ ಹೇಳಿವೆ.
