ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಇದೀಗ ದೇಗುಲದ ಅತಿಮುಖ್ಯ ಭಾಗವಾದ ಗರ್ಭಗುಡಿಯ ವಿನ್ಯಾಸವು ಅಂತಿಮ ಘಟ್ಟದಲ್ಲಿದೆ. ನರೇಂದ್ರ ಮೋದಿಯವರು ಈ ಹಿಂದೆ ದೇಗುಲದ ಗರ್ಭಗುಡಿಯನ್ನು ಒಡಿಶಾದ ಜಗತ್ ಪ್ರಸಿದ್ಧ ಕೊನಾರ್ಕ್ ಸೂರ್ಯ ದೇವಾಲಯದ ಶೈಲಿಯಲ್ಲಿ ವಿನ್ಯಾಸಗೊಳಿಸಬೇಕು ಎಂದು ಸಲಹೆ ನೀಡಿದ್ದರು.
ಈ ದೇವಾಲಯದ ಗರ್ಭಗುಡಿಯನ್ನು ಸೂರ್ಯರಶ್ಮಿಯು ಸೂರ್ಯದೇವನ ಮೇಲೆ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಈ ಮಾದರಿಯನ್ನು ರಾಮಮಂದಿರದ ಗರ್ಭಗುಡಿಗೂ ಅಳವಡಿಸಬಹುದು ಎಂಬುದು ಮೋದಿ ಸಲಹೆ ಆಗಿತ್ತು. ‘ಈಗ ವಾಸ್ತುಶಿಲ್ಪಿಗಳನ್ನು ಒಳಗೊಂಡ ತಜ್ಞರ ಸಮಿತಿಯು ರಾಮನವಮಿಯಂದು ಸೂರ್ಯನ ಕಿರಣಗಳು ರಾಮಲಲ್ಲಾ ಮೂರ್ತಿಯ ಮೇಲೆ ಬೀಳುವಂತೆ ಗರ್ಭಗುಡಿಯ ವಿನ್ಯಾಸವನ್ನು ಅಂತಿಮಗೊಳಿಸಿದೆ.
ಈಗಾಗಲೇ ಮಂದಿರದ ಇತರ ಭಾಗಗಳ ನಿರ್ಮಾಣ ಪ್ರಗತಿಯಲ್ಲಿದೆ. ಮಂದಿರದ ಮೇಲುಕಟ್ಟಡ ನಿರ್ಮಾಣಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿ ಮರಳುಗಲ್ಲು ಬಳಸಲಾಗುತ್ತಿದ್ದೂ, ರಾಜಸ್ಥಾನದ ಬನ್ಸಿ ಪಹಾಡ್‌ಪುರ ಜಿಲ್ಲೆಯಿಂದ ಮರಳುಗಲ್ಲುಗಳನ್ನು ತರಿಸಿಕೊಂಡು ಕೆತ್ತನೆ ಮಾಡಲಾಗುತ್ತಿದೆ. ದೇವಾಲಯದ ಗರ್ಭಗುಡಿಯ ಸ್ತಂಭದ ಕಲ್ಲುಗಳು ಈಗಾಗಲೇ ಸಿದ್ಧವಾಗಿವೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ. ರಾಮಮಂದಿರ ನಿರ್ಮಾಣದ ಹೊಣೆ ಹೊತ್ತ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿದುಬಂದಿದೆ.
ಮಂದಿರಕ್ಕೆ ಆಶಿಷ್ ಸೋಂಪುರ ಅವರು ವಾಸ್ತುಶಿಲ್ಪಿಯಾಗಿದ್ದಾರೆ. ನಿರ್ಮಾಣ ಸಮಿತಿಗೆ ಮಾಜಿ ಅಧಿಕಾರಿ ನೃಪೇಂದ್ರ ಮಿಶ್ರಾ ಅಧ್ಯಕ್ಷರಾಗಿದ್ದು, ವಾಸ್ತುಶಿಲ್ಪ ತಜ್ಞರಾದ ಪ್ರದೀಪ್ ಕುಮಾರ್ ಹಾಗೂ ಪ್ರೊ. ಗೋಪಾಲ ಕೃಷ್ಣನ್ ಹಾಗೂ ಇತರರು ಸಮಿತಿ ಸದಸ್ಯರಾಗಿದ್ದಾರೆ. ರಾಮಮಂದಿರ ನಿರ್ಮಾಣದ ಹೊಣೆ ಹೊತ್ತ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಏಷ್ಯಾನೆಟ್ ಸಮೂಹದೊಂದಿಗೆ ಕೆಲ ದಿನಗಳ ಹಿಂದೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
2023ರ ಡಿಸೆಂಬರ್‌ಗೆ ಗರ್ಭಗುಡಿ ನಿರ್ಮಾಣ ಮುಗಿಸಿ, 2024ರ ಸಂಕ್ರಾತಿಗೆ ಭಕ್ತರಿಗೆ ದೇಗುಲ ತೆರೆಯುವ ಉದ್ದೇಶವಿದೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಪೂರ್ಣಗೊಂಡಾಗ ಅದು ಅದ್ಭುತ ವಾಸ್ತುಶಿಲ್ಪ, ಕರಕುಶಲತೆ ಹಾಗೂ ಅತ್ಯುನ್ನತ ಎಂಜಿನಿಯರಿಂಗ್ ಸಂಕೇತ ಎನಿಸಿಕೊಳ್ಳಲಿದೆ. ಗರ್ಭಗೃಹ ನಿರ್ಮಾಣದ ಬಳಿಕ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ, ಪ್ರಾಣ ಪ್ರತಿಷ್ಠೆ ಪೂಜೆ ನೆರವೇರಿಸಲಾಗುವುದು. ಇದರ ಬಳಿಕ ದೂರದಿಂದಲೇ ದೇವರ ದರ್ಶನಕ್ಕೆ ಜನರಿಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
