ಕೊಯಮತ್ತೂರು: ತಾಯಿಯ ಎದೆ ಹಾಲು ಕುಡಿದ ಹೆಣ್ಣು ಮಗುವೊಂದು ಕೆಮ್ಮಿನಿಂದ ಉಸಿರುಗಟ್ಟಿ ಸಾವಿಗೀಡಾಗಿದೆ. ಈ ಘಟನೆ ನಡೆದಿರುವುದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ.
ಮುರಳಿ ಮತ್ತು ವರದಲಕ್ಷ್ಮೀ ದಂಪತಿಗೆ ಮದುವೆಯಾಗಿ ಒಂದೂವರೆ ವರ್ಷಗಳಾಗಿತ್ತು. ವರದಲಕ್ಷ್ಮಿ ಡಿ.20 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭದಲ್ಲಿ ಮಗುವಿಗೆ ಹೊಟ್ಟೆನೋವು ಸೇರಿ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಇದರಿಂದ ಮಗು ತೀರ ಅಸ್ವಸ್ಥಗೊಂಡಿತು. ಕೂಡಲೇ ದಂಪತಿಗಳು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಮಗುವಿಗೆ ವೈದ್ಯರು ಚಿಕಿತ್ಸೆಯನ್ನು ನೀಡಿದರು. ಆನಂತರ ಮಗು ಬಹಳ ಹೊತ್ತು ಅಳುತ್ತಿತ್ತು, ಇದರಿಂದ ತಾಯಿ ವರದಲಕ್ಷ್ಮಿ ಮಗುವಿಗೆ ಹಾಲು ಕುಡಿಸಿದ್ದು, ಆಗ ಮಗು ಅಲುಗಾಡದೆ ನಿಶ್ಚಲವಾಗಿದೆ.
ತಾಯಿಗೆ ಇದನ್ನು ಕಂಡ ಆಘಾತಗೊಂಡಿದ್ದು, ಕೂಡಲೇ ವೈದ್ಯರಿಗೆ ತಿಳಿಸಿದರು. ಮಗುವನ್ನು ಪರೀಕ್ಷೆ ಮಾಡಿದ ವೈದ್ಯರು ಕೂಡಲೇ ಹೆಚ್ಚಿನ ಚಿಕಿತ್ಸೆಗೆಂದು ಕೊಯಮತ್ತೂರು ಸರಕಾರಿ ಆಸ್ಪತೆಗೆ ಕರೆದೊಯ್ಯಲು ಹೇಳಿದ್ದಾರೆ. ಕೂಡಲೇ ದಂಪತಿ ಮಗುವನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಮಗುವನ್ನು ಪರಿಶೀಲನೆ ಮಾಡಿ ಮಗು ಮೃತಪಟ್ಟಿದೆ ಎಂದು ಹೇಳಿದರು. ತಾಯಿ ಮಗುವಿಗೆ ಹಾಲುಣಿಸುವಾಗ ಕೆಮ್ಮಿನಿಂದಾಗಿ ಉಸಿರುಗಟ್ಟಿ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.
