APMC: ರಾಜ್ಯದ ಅಡಿಕೆ(Arecanut) ಬೆಳೆಗಾರರಿಗೆ ಸಿಹಿ ಸುದ್ದಿ ದೊರೆತಿದ್ದು ಕರ್ನಾಟಕ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)ಯಲ್ಲಿ ಅಡಿಕೆ ನೇರ ಖರೀದಿಗೆ ಕಡಿವಾಣ ಹಾಕಲಿದೆ ಎಂದು ತಿಳಿದು ಬಂದಿದೆ.
ಹೌದು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಸಾಗರ ಶಾಸಕ ಬೇಳೂರು ಗೋಪಾಕೃಷ್ಣ ನೇತೃತ್ವದಲ್ಲಿ ಸಹಕಾರ ಸಂಘಗಳ ಮುಖಂಡರು ಬೆಂಗಳೂರಿನಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭೇಟಿ ಮಾಡಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಆಗ ಸಚಿವರು ಎಪಿಎಂಸಿಗಳಲ್ಲಿ ನೇರ ಅಡಿಕೆ ಖರೀದಿಗೆ ಖಾಸಗಿ ಅವರಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇದರಿಂದಾಗಿ ಸಹಕಾರಿ ಸಂಘಗಳು ಅಡಿಕೆ ಖರೀದಿ ಮಾಡಲು ಬೆಂಬಲ ದೊರೆಯಲಿದ್ದು, ಕ್ಯಾಂಪ್ಕೋ, ಮ್ಯಾಮ್ಕೋಸ್‌ನಂತಹ ಸಂಸ್ಥೆಗಳಲ್ಲಿ ಅಡಿಕೆ ಉತ್ತಮ ದರಕ್ಕೆ ಮಾರಾಟವಾಗಲಿದೆ.
ಹೀಗಾಗಿ ಸಚಿವರು ಅಧಿಕಾರಿಗಳಿಗೆ ಎಪಿಎಂಸಿಯಲ್ಲಿ ಅಡಿಕೆ ನೇರ ಖರೀದಿ ಮೂಲಕ ಸಂಗ್ರಹವಾಗುವ ಸೆಸ್ ಮತ್ತು ಕ್ಯಾಂಪ್ಕೋ, ಮ್ಯಾಮ್ಕೋಸ್‌ನಂತಹ ಸಂಸ್ಥೆಗಳಲ್ಲಿ ಅಡಿಕೆ ಖರೀದಿ ಮೂಲಕ ಸಂಗ್ರಹವಾಗುವ ಸೆಸ್ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
