Bantwal: ಬಂಟ್ವಾಳ: 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬಯಿಗೆ ಬದುಕು ಅರಸಲು ಹೋಗಿದ್ದ ನರಿಕೊಂಬಿನ ವ್ಯಕ್ತಿಯೊಬ್ಬರು ಸುಮಾರು 62 ವರ್ಷಗಳ ಬಳಿಕ ಮನೆಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಆತ ವಾಪಸ್ ಬಂದ ಕಾರಣ ಕೇಳಿ ಮನೆಯವರಿಗೆ ತೀವ್ರ ಬೇಸರ ಕಾಡಿದೆ.
ನರಿಕೊಂಬು ಗ್ರಾಮದ ಕರ್ಬೆಟ್ಟು ಗೌಂಡ್ಲೆಪಾಲ್ ಸಂಜೀವ ಪೂಜಾರಿ (75) ಅವರು 62 ವರ್ಷಗಳ ಹಿಂದೆ ಸ್ಥಳೀಯ ನಿವಾಸಿ ತನಿಯಪ್ಪ ಅವರ ಜತೆಗೆ ಮುಂಬಯಿಗೆ ಕೆಲಸಕ್ಕಾಗಿ ತೆರಳಿದ್ದರು. ಬಳಿಕ ತಾವು ಹೋಗಿದ್ದ ಕೆಲಸವನ್ನು ಬಿಟ್ಟು ಮನೆಯವರ ಸಂಪರ್ಕವನ್ನೂ ಕಳೆದುಕೊಂಡಿದ್ದರು.
ಮನೆಯವರು ಅಂದು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಮಧ್ಯಾಹ್ನ ಅವರು ನರಿಕೊಂಬಿಗೆ ಬಂದು ಅವರ ಅಣ್ಣನ ಹೆಸರು ಹೇಳಿ ಮನೆ ಹುಡುಕಿಕೊಂಡು ಬಂದು ಮನೆ ಮಂದಿಗೆ ಆಶ್ಚರ್ಯ ಮೂಡಿಸಿದ್ದಾರೆ. ಆದರೆ ಆತ ಯಾಕೆ ಬಂದರು ಅಂತ ತಿಳಿದ ಮನೆಯವರಿಗೆ ಬೇಸರ ಮೂಡಿದೆ.
62 ವರ್ಷ ಬಾರದೇ ಇದ್ದವರು ಈಗ ಬoದುದು ಮನೆಯವರಿಗೆ ಮತ್ತು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಈ ವರೆಗೆ ನೀವು ಎಲ್ಲಿದ್ದಿರಿ, ಇಲ್ಲಿ ತನಕ ಯಾಕೆ ಬರಲಿಲ್ಲ,ಈಗ ಯಾಕೆ ಬಂದಿರಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಆತ ಉತ್ತರಿಸಿದ್ದು ಕೇಳಿ ಮನೆಯವರಿಗೆ ಬೇಜಾರಾಗಿದೆ. ನಾನು ಮುಂಬಯಿಗೆ ಹೋದವನು ಹಲವಾರು ಕಡೆ ಕೆಲಸ ಮಾಡಿ ಬಳಿಕ ಲಾರಿ ಕಂಪೆನಿ ಒಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ ನನಗೆ 60 ವರ್ಷ ಆಯ್ತಲ್ಲ. 60 ವರ್ಷದ ಬಳಿಕ ಅಲ್ಲಿ ಕೆಲಸಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ಅಲ್ಲಿಲ್ಲಿ ಬೇರೆ ಬೇರೆ ಕೆಲಸ ಮಾಡಿ ಕಳೆದ 2 ವರ್ಷಗಳಿಂದ ಮುಂಬಯಿಯ ಹೊಟೇಲೊಂದರಲ್ಲಿ ಕೆಲಸದಲ್ಲಿದ್ದೆ. ಆದರೆ ಆ ಹೋಟೇಲ್ ಮಾಲಕ ಸಂಬಳವನ್ನೇ ಕೊಟ್ಟಿಲ್ಲ.
ಹಾಗಾಗಿ ನಾನು ಜೂನ್ 4ರಂದು ಬಸ್ಸಿನಲ್ಲಿ ಮುಂಬಯಿಯಿಂದ ಹೊರಟು ಮಂಗಳೂರಿಗೆ ಆಗಮಿಸಿದೆ. ಅಲ್ಲಿಂದ ಪಾಣೆಮಂಗಳೂರಿಗೆ ಬಂದು ಸ್ವಗ್ರಾಮ ನರಿಕೊಂಬಿಗೆ ಬಂದಿದ್ದೇನೆ ಎಂದು ಮನೆಮಂದಿಗೆ ತಿಳಿಸಿದ್ದಾರೆ. ಹಾಗಾಗಿ ಈ ವ್ಯಕ್ತಿ ತನಗೆ ವಯಸ್ಸಾಯಿತು, ಇನ್ನು ತನ್ನಿಂದ ಆಗಲ್ಲ ಎಂದು ಮನೆಯವರ ಸಹಾಯ ಪಡೆಯಲು ಮಾತ್ರ ಬಂದುದು ಅನ್ನೋದು ಮನೆಯವರಿಗೆ ಖಾತರಿಯಾಗಿದೆ. ಆತ ಮನೆ ಬಿಟ್ಟು ಹೋದ ನಂತರ ತಲೆಮಾರುಗಳೇ ಜರುಗಿವೆ. ಈಗ ಬಂದ ವೃದ್ಧನನ್ನು ಸ್ವೀಕರಿಸಿ ನೋಡಿಕೊಳ್ಳಬೇಕಾದ ಅನಿವಾರ್ಯತೆ ಮನೆಯವರದಾಗಿದೆ.
