Mangalore: ಬಂಟ್ವಾಳದ ರಹಿಮಾನ್ ಹತ್ಯೆ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರು ಶಾದಿ ಮಹಲ್ ಸಭಾಂಗಣದಲ್ಲಿ ಸಭೆ ನಡೆಸಿರುವ ಘಟನೆ ನಡೆದಿದೆ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ಕುರಿತು ಚರ್ಚೆ ನಡೆದಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರು ಸಾಮೂಹಿಕ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆಯ ಹಿನ್ನೆಲೆಯಲ್ಲಿ ಒಂದು ವಾರ ಮುಂದೂಡುವುದಾಗಿ ಹೇಳಿದ್ದು, ಇದರ ಬೆನ್ನಲ್ಲೇ ಅಲ್ಲಿ ನೆರೆದಿದ್ದ ಮುಸ್ಲಿಮರು ಆಕ್ರೋಶಗೊಂಡಿರುವ ಘಟನೆ ನಡೆದಿದೆ.
ರಾಜೀನಾಮೆ ಕೊಡಲೇ ಬೇಕು ಎಂದು ಹೇಳಲಾಯಿತು. ಈ ಮೂಲಕ ಕಾಂಗ್ರೆಸ್ ಮುಸ್ಲಿಮರು ಆಯೋಜನೆ ಮಾಡಿದ್ದ ಸಭೆಯಲ್ಲಿ ಜನಾಕ್ರೋಶ ತುಂಬಿತು.
ನಗರದ ಬೋಳಾರ್‌ನಲ್ಲಿರುವ ಶಾದಿ ಮಹಲ್‌ನಲ್ಲಿ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡುತ್ತಿದ್ದಾಗ ರೋಷಗೊಂಡ ಕಾರ್ಯಕರ್ತರು ಬೊಬ್ಬೆ ಹೊಡೆದು, ರಾಜೀನಾಮೆ ಬೇಕೇ ಬೇಕು ಎಂದು ಒತ್ತಾಯ ಮಾಡಿದ್ದಾರೆ. ಆದರೆ ಈ ಸಮಯದಲ್ಲಿ ಕಾರ್ಯಕರ್ತರನ್ನು ಸಮಾಧಾನ ಮಾಡಲು ಪ್ರಯತ್ನ ನಡೆಸಿದಾಗ ವೇದಿಕೆಯತ್ತ ನುಗ್ಗಿ ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ.
ಎಷ್ಟೇ ಸಮಾಧಾನ ಮಾಡಿದರೂ ಕಾರ್ಯಕರ್ತರ ಆಕ್ರೋಶ ಕಡಿಮೆಯಾಗಿರಲಿಲ್ಲ. ವಾಗ್ವಾದ ಅರ್ಧ ತಾಸಿಗೂ ಹೆಚ್ಚು ಕಾಲ ನಡೆದಿದೆ. ನಾವು ರಾಜೀನಾಮೆ ಸಲ್ಲಿಸಿ ಆಗಿದೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಮುಖಂಡ ಅಬ್ದುಲ್ ರವೂಫ್ ಹೇಳಿ ಸಮಾಧಾನದಿಂದ ಕುಳಿತುಕೊಳ್ಳುವಂತೆ ಕೋರಿದರು.
ಕೊನೆಗೂ ಶಾಹುಲ್ ಹಮೀದ್ ಅವರು ʼನಾವೆಲ್ಲರೂ ರಾಜೀನಾಮೆ ಸಲ್ಲಿಸಿದ್ದೇವೆ. ಸಾಮೂಹಿಕ ರಾಜೀನಾಮೆ ಪತ್ರವನ್ನು ಒಂದು ವಾರದ ಒಳಗೆ ಕೆಪಿಸಿಸಿಗೆ ಕಳುಹಿಸಲಾಗುವುದುʼ ಎಂದು ಹೇಳಿ ಹೋಗಿರುವ ಘಟನೆ ನಡೆದಿದೆ.
