Suhas Shetty: ರೌಡಿಶೀಟರ್, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿರುವ ಫೋಟೋ ವೈರಲ್ ಆಗಿದೆ. ಎ.2 ರಂದು ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಆರೋಪಿಗಳು ನೈಟ್ ಪಾರ್ಟಿ ಮಾಡಿದ್ದಾರೆ.
ಹತ್ಯೆ ಮಾಡಲೆಂದೇ ಸ್ಕೆಚ್ ರೂಪಿಸಲು ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕ್ಯಾಂಪ್ ಫೈರ್ ಹಾಕಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳಾದ ಮಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಪಾರ್ಟಿ ಮಾಡಿದ್ದಾರೆ. ಇವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಇದ್ದಾರೆ. ರಂಜಿತ್‌ನನ್ನು ಈ ಪಾರ್ಟಿಯಲ್ಲಿ ನಿಯಾಜ್ ಮಝಮ್ಮಿಲ್‌ಗೆ ಪರಿಚಯ ಮಾಡಿಸಿದ್ದ. ಸುಹಾಸ್ ಹತ್ಯೆ ಕುರಿತು ಇಲ್ಲಿ ಮಾತುಕತೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಫಾಝಿಲ್ ಸಹೋದರ ಆದಿಲ್ ಐದು ಲಕ್ಷ ಹಣವನ್ನು ಸುಹಾಸ್ ಶೆಟ್ಟಿ ಹತ್ಯೆಗೆ ಸುಪಾರಿ ನೀಡಿದ್ದ. ಇದರಲ್ಲಿ 3 ಲಕ್ಷ ರೂ. ಹಣವನ್ನು ಮುಂಗಡವಾಗಿ ನೀಡಲಾಗಿತ್ತು. ಈ ಹಣದಲ್ಲಿಯೇ ಪಾರ್ಟಿ ಮಾಡಲಾಗಿದೆಯೇ? ಎನ್ನುವ ಅನುಮಾನ ವ್ಯಕ್ತವಾಗಿದೆ.
ಮೊಹಮ್ಮದ್ ಮಝಮ್ಮಿಲ್ ನಾಲ್ಕು ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕಳಸ ತಾಲೂಕಿನ ರುದ್ರ ಪಾದದ ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಸುಹಾಸ್ ಮೇಲೆ ದಾಳಿ ಮಾಡಲು ಈತ ಲಾಂಗ್ ತಂದುಕೊಟ್ಟ ಆರೋಪವಿದೆ.
