Home » ಬೆಳ್ತಂಗಡಿ | ನಿಡ್ಲೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು | 1,75,000 ರೂ. ಮೌಲ್ಯದ ಚಿನ್ನಾಭರಣ ಕಳವು

ಬೆಳ್ತಂಗಡಿ | ನಿಡ್ಲೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು | 1,75,000 ರೂ. ಮೌಲ್ಯದ ಚಿನ್ನಾಭರಣ ಕಳವು

by ಹೊಸಕನ್ನಡ
0 comments

ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಅಂದಾಜು ರೂ. 1,75,000 ಮೌಲ್ಯದ 6 ಪವನ್ ಚಿನ್ನದ ಆಭರಣಗಳನ್ನು ಕಳವುಗೈದ ಘಟನೆ ಸೆ.8ರ ರಾತ್ರಿ ನಡೆದಿದೆ.

ನಿಡ್ಲೆ ಗ್ರಾಮದ ಮಾಡಂಗಲ್ಲು ನಿವಾಸಿ ಗಣೇಶ ಗೌಡ ಎಂ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ.

ಸೆ.8 ರಂದು ಸಂಜೆ 4.30ಕ್ಕೆ ಗಣೇಶ್ ಗೌಡ ಅವರು ತನ್ನ ಮನೆಯಾದ ನಿಡ್ಲೆ ಗ್ರಾಮದ ಮಾಡಂಗಲ್ಲು ಎಂಬಲ್ಲಿಂದ ಹೆಂಡತಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೆಂಡತಿ ತವರು ಮನೆಯಾದ ಮಿತ್ತಬಾಗಿಲು ಗ್ರಾಮದ ಬಂಗಾಡಿಗೆ ಹೋಗಿದ್ದರು. ಅವರ ತಾಯಿ ಮಾತ್ರ ಮನೆಯಲ್ಲಿದ್ದು ಹೋಗುವ ಸಮಯ ಅವರಲ್ಲಿ ರಾತ್ರಿ ವೇಳೆ ಪಕ್ಕದ ಚಂದಪ್ಪ ಅವರ ಮನೆಯಲ್ಲಿ ಮಲಗಲು ತಿಳಿಸಿ ಹೋಗಿದ್ದರು ಎಂದು ಹೇಳಲಾಗಿದೆ.

ಅದರಂತೆ ತಾಯಿ ರಾತ್ರಿ 7 ಗಂಟೆಗೆ ಮನೆಗೆ ಬೀಗ ಹಾಕಿ ಚಂದಪ್ಪ ರವರ ಮನೆಗೆ ಹೋಗಿ ರಾತ್ರಿ ಅಲ್ಲೇ ಮಲಗಿದ್ದರು. ಸೆ.9 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದ್ದು, ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿದ್ದ ಕಪಾಟಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಪಾಟಿನ ಒಳಗೆ ಇಟ್ಟಿದ್ದ 6 ಪವನ್ ಚಿನ್ನವನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಕಳವಾದ ಚಿನ್ನದ ಒಟ್ಟು ಮೌಲ್ಯ ರೂ.1,75,000 ರೂ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment