ಬೆಳ್ತಂಗಡಿ: ಭೀಕರ ಮಳೆಯ ನಡುವೆಯೇ ಸದಾ ಕೈ ಕೊಡುತ್ತಿರುವ ವಿದ್ಯುತ್, ಒಂದೆಡೆ ವಿದ್ಯುತ್ ಗ್ರಾಹಕರ ನಿರಂತರ ಫೋನ್ ಕರೆ, ಒತ್ತಡ, ಬೆದರಿಕೆ, ಇನ್ನೊಂದೆಡೆ ಅಧಿಕಾರಿಗಳ ಕಿರಿಕಿರಿ ಇದರ ನಡುವೆಯೇ ಸುಡುವ ಬಿಸಿಲಿರಲಿ, ಕೊರವ ಚಳಿ ಇರಲಿ, ರಣಭೀಕರ ಮಳೆ ಇರಲಿ ಯಾವುದನ್ನು ಲೆಕ್ಕಿಸದೆ ಸದಾ ಸಮಾಜಕ್ಕೆ ಬೆಳಕನ್ನೇ ನೀಡುವ ಕಾಯಕದಲ್ಲಿ ತೊಡಗಿರುವ ಲೈನ್ ಮ್ಯಾನ್ ಗಳದ್ದು ಕಷ್ಟ,ಒತ್ತಡ ದುಃಖ, ದುಮ್ಮಾನಗಳ,ಜಂಜಾಟದ ಬದುಕಾಗಿರುತ್ತದೆ. ಹೀಗೆ ಸದಾ ತಂತಿಯ ಮೇಲಿನ ನಡಿಗೆಯoತಿರುವ ಇವರ ಬದುಕು ಮತ್ತು ಕಾಯಕದಲ್ಲಿ ಅಪಾಯ, ಅವಘಡಗಳು ಬೆನ್ನ ಹಿಂದೆಯೇ ಸುತ್ತಿ ಸುಳಿದಾಡಿ ಕೊಂಡಿರುತ್ತವೆ. ಇಂತಹಾ ದಾರುಣ ಘಟನೆಯೊಂದು ನಿನ್ನೆ ಮಧ್ಯಾನ್ನ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಓಡಿಲ್ನಾಳ ಎಂಬಲ್ಲಿ ನಡೆದಿದೆ.
ಸಮಾಜದ ಕತ್ತಲೆ ಕಳೆದು ಬೆಳಕು ನೀಡುವ ಕಾಯಕದಲ್ಲಿ ತೊಡಗಿಕೊಂಡಿದ್ದ ಗೇರುಕಟ್ಟೆ ವಿಭಾಗದ ಸಹಾಯಕ ಪವರ್ ಮ್ಯಾನ್ ಟ್ರಾನ್ಸ್ ಫಾರ್ಮರ್ ವಿದ್ಯುತ್ ಕಂಬದಲ್ಲಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ವಿದ್ಯುತ್ ಶಾಕ್ ನಿಂದ ಕಂಬದಲ್ಲೇ ದಾರುಣ ಮೃತ್ಯು ವಶರಾಗಿ ಕತ್ತಲ ಲೋಕಕ್ಕೆ ಪಯಣಿಸಿದ ಹೃದಯವಿದ್ರಾವಕ ಘಟನೆ ನಡೆದಿದೆ. ಸಮಾಜದ ಕತ್ತಲೆ ಕಳೆಯುವ ಕಾಯಕದಲ್ಲಿ ತೊಡಗುತ್ತಲೇ ದಾರುಣ ವಿಧಿವಶರಾದ ಬೆಳ್ತಂಗಡಿ ಮೆಸ್ಕಾಂ ನ ಸಹಾಯಕ ಪವರ್ ಮ್ಯಾನ್ ಗೇರುಕಟ್ಟೆ ರೇಷ್ಮೆರೋಡು ನಿವಾಸಿ ವಿಜೇಶ್ ಎಂದು ಗುರುತಿಸಲಾಗಿದೆ. ವಿದ್ಯುತ್ ಶಾಕ್ ನ ಪರಿಣಾಮವಾಗಿ ದಾರುಣವಾಗಿ ಅಸುನೀಗಿ ಟ್ರಾನ್ಸ್ಫರ್ ಕಂಬದಲ್ಲೇ ಸಿಲುಕಿಕೊಂಡಿದ್ದ ಇವರ ಸ್ಥಿತಿಯನ್ನು ನೋಡಿದರೆ ಕರುಳು ಕಿತ್ತು ಬರುವಂತಾಗುತ್ತಿದ್ದರಿಂದ ಅನೇಕರ ಕಣ್ಣಂಚಿನಲ್ಲಿ ಕಣ್ಣೀರು ಹರಿಯುತ್ತಿತ್ತು.
ಕರಾವಳಿ ಪ್ರದೇಶದಲ್ಲಿ ಕರೆಂಟ್ ಶಾಕ್ ಹೊಡೆದು ಸಿಬ್ಬಂದಿಗಳು ಸಾವಾಗುತ್ತಿರುವುದು ಇದು ಮೊದಲೇನಲ್ಲ. ಅಜಾಗರೂಕತೆ ಮತ್ತು ಮುಂಜಾಗರೂಕತೆ ಇಲ್ಲದೆ ಇರುವ ಕಾರಣ ಸಾಲು ಸಾಲು ಸಾವುಗಳು ಸಂಭವಿಸುತ್ತಿದ್ದರೂ ಮೆಸ್ಕಾಂ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ವರ್ಕ್ ಪರ್ಮಿಟ್ ಪಡೆಯುವ ಸಂದರ್ಭ ಮತ್ತು ಕಂಬಗಳಲ್ಲಿ ಕೆಲಸ ನಿರ್ವಹಿಸುವ ಸನ್ನಿವೇಶಗಳಲ್ಲಿ ಕೆಲ್ಸ ಮುಗಿಸುವ ಮುನ್ನವೇ ಲೈನ್ ಅನ್ನು ಮರು ಚಾರ್ಜ್ ಮಾಡುವುದು ಹೆಚ್ಚಿನ ಅವಘಡಗಳಿಗೆ ಕಾರಣ. ಈ ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.
