Bengaluru Lakes: ರಾಜಧಾನಿ ಬೆಂಗಳೂರು(Bengaluru) ಒಂದು ಕಾಲದಲ್ಲಿ ಕೆರೆಗಳ(Lake) ಮಧ್ಯದಲ್ಲೇ ತಲೆ ಎತ್ತಿದ ನಗರ(City). ಆದರೆ ಕಾಲ ಕ್ರಮೇಣ ಆಧುನಿಕತೆಗೆ(Modernization) ಮಾರುಹೋಗಿ ಕೆರೆಗಳು ನಾಶವಾದವು. ಕೆರೆಗಳ ಜಾಗದಲ್ಲಿ ಕಾಂಕ್ರೀಟ್ ಕಾಡುಗಳು(Concrete forest) ತಲೆ ಎತ್ತಿದವು. ಆದರೂ ಅಲ್ಲಿ ಇಲ್ಲಿ ಒಂದಷ್ಟು ಕೆರೆಗಳು ಉಳಿದುಕೊಂಡಿದೆ. ಇದೀಗ ಭಾರಿ ಮಳೆಗೆ ಹಲವು ವರ್ಷಗಳ ನಂತರ ಕೆಲ ಕೆರೆಗಳು ಸಂಪೂರ್ಣ ಭರ್ತಿಯಾಗಿ ಮೈದುಂಬಿದೆ.
ನಗರದಾದ್ಯಂತ ಇರುವ 183 ಕೆರೆಗಳ ಪೈಕಿ ಸುಮಾರು 100 ಕೆರೆಗಳು ಇದೀಗ ಪೂರ್ತಿ ಭರ್ತಿಯಾಗಿವೆ. ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ(BBMP) ಅಧಿಕಾರಿಗಳು ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು, ಕೆರೆಗಳು ತುಂಬಿ ಅಪಾಯದ ಅಂಚಿನಲ್ಲಿವೆ. ಹೀಗೆ ಮಳೆ ಮುಂದುವರೆದರೆ ಕೋಡಿ ಹರಿದು ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಬೆಂಗಳೂರು ಜನತೆ ಮಳೆಯ ಆರ್ಭಟಕ್ಕೆ ನಲುಗಿ ಹೋಗಿದ್ದಾರೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ. ಆದರೆ ಇಲ್ಲಿ ತುಂಬಿರುವ ನೀರಿಗೂ ಕೆರೆಗಳು ತುಂಬಿರುವುದಕ್ಕೂ ಸಂಬಂಧ ಇಲ್ಲ. ಈಗ ನಗರದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಕಾರಣ ಅವೈಜ್ಞಾನಿಕ ರಸ್ತೆ, ಕಟ್ಟಡಗಳು ಹಾಗೂ ಮುಚ್ಚಿರು ಚರಂಡಿ ಮತ್ತು ಒತ್ತುವರಿ. ಒಂದು ವೇಳೆ ಮಳೆ ಹೀಗೆ ಮುಂದುವರೆದರೆ ಕೆರೆಗಳು ಭರ್ತಿಯಾದ ಹಿನ್ನೆಲೆ ತೊಂದರೆಯಾಗಬಹುದು ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸುಮಾರು 80-85 ಕೆರೆಗಳು ತುಂಬಿದ್ದವು, ಆದರೆ ಈಗ ಬರೋಬ್ಬರಿ 100ಕ್ಕೆ ತಲುಪಿದೆ. ಈ ಸಂದಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲು ಕ್ಷೇತ್ರ ಎಂಜಿನಿಯರ್‌ಗಳ ಸಂಪರ್ಕದಲ್ಲಿ ಇದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿ ತಿಳಿದ್ದಾರೆ.
ಕಲ್ಕೆರೆ, ರಾಮಾಪುರ ಸೇರಿದಂತೆ ಯಲಹಂಕ ಹಾಗೂ ಮಹದೇವಪುರದ ಸುತ್ತ ಇರುವ ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರದ ಕೆರೆಗಳು ತುಂಬಿವೆ. ಇನ್ನು ನಗರದ ಇತರ ಮಡಿವಾಳ, ಬನ್ನೇರುಘಟ್ಟದ ಕೆರೆಗಳೂ ತುಂಬಿವೆ. ಇನ್ನುಳಿದ ಬೊಮ್ಮನಹಳ್ಳಿ ಸೇರಿದಂತೆ ಸುಮಾರು 10-15 ಕೆರೆಗಳು ಇನ್ನೂ ತುಂಬಿಲ್ಲ. ಆದರೂ ಅಲ್ಲೂ ಎಚ್ಚರಿಕೆ ವಹಿಸಲಾಗಿದೆ. ಮಳೆ ಆರಂಭಕ್ಕೂ ಮುನ್ನಾ ಸುಮಾರು 80ರಷ್ಟು ಕೆರೆಗಳ ಹೂಳು ತೆಗೆದು ಸ್ವಚ್ಛಗೊಳಿಸಲಾಗಿದೆ. ಇನ್ನುಳಿದವುಗಳು ಭರ್ತಿಯಾಗಿರುವ ಹಿನ್ನೆಲೆ ಹೂಳು ತೆಗೆಯೋದು ಕಷ್ಟದ ಕೆಲಸ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
