ಅಪರಿಚಿತನ ಕೈಗೆ ಮೊಬೈಲ್ ಕೊಟ್ಟು ಯುವಕನೊಬ್ಬ ಬ್ಲ್ಯಾಕ್‌ಮೇಲ್‌ಗೆ ಸಿಲುಕಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ.
ಅಸ್ಸಾಂ ಮೂಲದ ಪ್ರಸ್ತುತ ಹೆಬ್ಬಾಳ ನಿವಾಸಿಯಾಗಿರುವ 21 ವರ್ಷದ ಯುವಕ, ಮತ್ತಿಕೆರೆ ಟೀ ಶಾಪ್ ಬಳಿ ಇದ್ದಾಗ ಅಲ್ಲೆ ಇದ್ದ ಪವನ್ ಎಂಬಾತ ಯುವಕನನ್ನು ಮಾತನಾಡಿಸಿದ್ದ. ನಂತರ ತನ್ನ ಮೊಬೈಲ್ ಕೆಟ್ಟು ಹೋಗಿದೆ, ಕರೆ ಮಾಡಲು ಮೊಬೈಲ್ ಕೇಳಿ ಪಡೆದಿದ್ದ. ಆತನ ಮಾತು ನಂಬಿದ ಯುವಕ ತನ್ನ ಮೊಬೈಲ್ ಕೊಟ್ಟಿದ್ದ. ಅಪರಿಚಿತ ಮೊಬೈಲ್ ತೆಗೆದುಕೊಂಡು ಅದರಲ್ಲಿ ಮಾತನಾಡುತ್ತಲೇ ಯಾಮಾರಿಸಿ ಅಲ್ಲಿಂದ ಪರಾರಿಯಾಗಿದ್ದ. ನಂತರ ಯುವಕ ಯಾಮಾರಿದ್ದು ಆತನ ಅರಿವಿಗೆ ಬಂದಿದೆ.
ಆದರೆ ಮೊದಲೇ ಲಾಕ್ ನೋಡಿಕೊಂಡಿದ್ದ ಈತ, ಮೊಬೈಲ್ ಪಡೆದ ನಂತರ ಲಾಕ್ ತೆರೆದು, ಅದರಲ್ಲಿದ್ದ ಯುವಕನ ಪ್ರೇಯಸಿ ಜತೆಗಿನ ಖಾಸಗಿ ಫೋಟೋ, ವಿಡಿಯೋಗಳನ್ನು ನೋಡಿದ್ದ. ಇಷ್ಟು ಮಾತ್ರವಲ್ಲದೆ, ಇದನ್ನೇ ಬಂಡವಾಳ ಮಾಡಿಕೊಂಡು ಅದೇ ಮೊಬೈಲ್‌ನಿಂದ ಯುವಕನ ಪ್ರೇಯಸಿ, ಸ್ನೇಹಿತರಿಗೆ ಪೋಟೋ, ವಿಡಿಯೋ ಕಳಿಸಿ ಒಂದು ಲಕ್ಷ ರೂ. ನೀಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ.
ಹಾಗೂ ಯುವಕನ ತಾಯಿಯ ಮೊಬೈಲ್‌ಗೂ ಪೋಟೋ ಕಳಿಸಿ 50 ಸಾವಿರ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಯುವಕನ ಪೋಷಕರು ದೂರು ನೀಡಿದ್ದು, ಪೋಲೀಸರು ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆಗೆ ಯತ್ನಿಸಿದ್ದ ಆರೋಪಿ ಪವನ್ ಕುಮಾರ್ (26)ನನ್ನು ಬಂಧಿಸಿದ್ದಾರೆ.
ಇನ್ನೂ, ಮೊಬೈಲ್ ಕಳೆದು ಹೋದರೆ, ಕಸ್ಟಮರ್ ಕೇರ್ ಗೆ ಕರೆ ಮಾಡಿ ಸಿಮ್ ಅನ್ನು ಡಿ ಆಕ್ಟಿವೇಟ್ ಮಾಡಿಸಿ. ನಂತರ ಗೂಗಲ್ ಎಕೌಂಟ್ ಗೆ ಹೇೋಗಿ ಎರೇಸ್ ಆಲ್ ಡಾಟ್ ರಿಮೋಟಲಿ ಆಯ್ಕೆ ಮಾಡಿ ಫೋನ್ ದಾಖಲೆಗಳನ್ನು ಅಳಿಸಿ. ಹಾಗೇ ತಕ್ಷಣವೇ ನಿಮ್ಮ ಬ್ಯಾಂಕ್ ಎಕೌಂಟ್, ಆನ್ ಲೈನ್ ಎಕೌಂಟಗಳ ಪಾಸ್ ವರ್ಡ್ ಗಳನ್ನು ಬದಲಾಯಿಸಿ. ಅದೇ ರೀತಿ ಫೇಸ್ ಬುಕ್, ಟ್ವಿಟರ್ ಇತ್ಯಾದಿ ಸಾಮಾಜಿಕ ಜಾಲತಾಣ, ಜಿಮೇಲ್ ಗಳ ಪಾಸ್ ವರ್ಡ್ ಅನ್ನು ಕೂಡ ಬದಲಾಯಿಸಿ. ಜೊತೆಗೆ ಗೂಗಲ್ ಡ್ರೈವ್ ಡ್ರಾಪ್ ಬಾಕ್ಸ್ ಇತ್ಯಾದಿಗಳನ್ನು ಅನ್ ಲಿಂಕ್ ಮಾಡಿ.
