4
Bhopal: ಮಧ್ಯಪ್ರದೇಶದ ಶಿವಪುರಿಯಲ್ಲಿ ಮನೆಯೊಂದರ ಮೇಲೆ ಶುಕ್ರವಾರ ಭಾರತೀಯ ವಾಯು ಪಡೆ ವಿಮಾನದಿಂದ ಆಕಸ್ಮಿಕವಾಗಿ ಬೃಹತ್ ಗಾತ್ರದ ಕಬ್ಬಿಣದ ಟ್ಯಾಂಕ್ ಬಿದ್ದು ಅವಾಂತರ ಸಂಭವಿಸಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಗ್ವಾಲಿಯರ್ ವಾಯುನೆಲೆಯಿಂದ ಹೊರಟಿದ್ದ ವಾಯುಪಡೆ ವಿಮಾನದಿಂದ ಮನೋಜ್ ಸಾಗರ್ ಎಂಬುವವರ ಮನೆ ಮೇಲೆ ಸ್ಫೋಟಕ ರಹಿತ ಟ್ಯಾಂಕ್ ಬಿದ್ದಿದೆ.
ಅವಶೇಷಗಳು ಪಕ್ಕದಲ್ಲಿದ್ದ ಕಾರಿನ ಮೇಲೆ ಬಿದ್ದಿವೆ. ಭಾರಿ ಗಾತ್ರದ ವಸ್ತು ಬಿದ್ದ ಸ್ಥಳದಲ್ಲಿ 8 ರಿಂದ 10 ಅಡಿಯಷ್ಟು ಗುಂಡಿ ಬಿದ್ದಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೋಜ್ ಸಾಗರ್ ಮತ್ತವರ ಪತ್ನಿ ಮಕ್ಕಳು ಮನೆಯ ಮತ್ತೊಂದು ಭಾಗದಲ್ಲಿದ್ದರು. ಹೀಗಾಗಿ ಯಾವುದೇ ಅಪಾಯವಾಗಿಲ್ಲ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಯುಪಡೆ, ವಿಮಾನದಿಂದ ಆಕಸ್ಮಿಕವಾಗಿ ಭಾರಿ ಟ್ಯಾಂಕ್ ಬಿದ್ದಿದೆ. ಇದರಿಂದ ಮನೆ ಜಖಂಗೊಂಡಿದೆ. ಮನೆ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
