Coffee Price Hike: ಕಾಫಿ ಪ್ರಿಯರಿಗೆ ಬಿಗ್ ಶಾಕ್ ಒಂದಿದೆ. ಹೌದು, ಬೆಂಗಳೂರಿನ ಜನರಿಗೆ ಕಾಫಿ ಬೆಲೆಯ ಬಿಸಿ ತಟ್ಟಲಿದೆ. ಯಾಕೆಂದರೆ ಬೆಂಗಳೂರಿನ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳು ಕಾಫಿ ಬೆಲೆಯನ್ನು ಹೆಚ್ಚಿಸಲು ಮುಂದಾಗಿವೆ.
ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ಕಾಫಿ ಬೀಜದ ಬೆಲೆ ಏರಿಕೆ ಹಾಗೂ ಭಾರತದಿಂದ ರಫ್ತು ಹೆಚ್ಚಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದ್ದು, ಈಗಾಗಲೇ ಕಾಫಿ ಬೀಜದ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇಕಡಾ 60ರಷ್ಟು ಏರಿಕೆಯಾಗಿದೆ. ಈ ಹಿನ್ನಲೆ ಹೊಸ ವರ್ಷದಿಂದ ಬೆಲೆಯನ್ನು ಹೆಚ್ಚಿಸುವುದಾಗಿ ಬೆಂಗಳೂರಿನ ಕೆಫೆಗಳು ಘೋಷಿಸಿವೆ. ಫಿಲ್ಟರ್ ಕಾಫಿಯ ಬೆಲೆ ಈಗಾಗಲೇ ಏರಿಕೆಯಾಗಿದೆ. ಬೆಲೆ ವಿವರ ಇಲ್ಲಿದೆ.
ಕಳೆದ ಮೂರು ತಿಂಗಳಲ್ಲಿ ಹುರಿದ ಕಾಫಿ ಬೀಜದ ಬೆಲೆ 100-200 ರೂ.ಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಹುರಿದ ಕಾಫಿ ಬೀಜದ ಬೆಲೆ 1 ಕೆಜಿಗೆ 800 ರಿಂದ 1,200 ರೂ. ಇದೆ.
ದಿ ಕೆಫೀನ್ ಬಾರ್‌ನ ಚರ್ಚ್ ಸ್ಟ್ರೀಟ್ ಮತ್ತು ಜಯನಗರದಲ್ಲಿ ಔಟ್‌ಲೆಟ್‌ಗಳಲ್ಲಿ ಮುಂದಿನ 10 ದಿನಗಳಲ್ಲಿ ಒಂದು ಕಪ್ ಕ್ಯಾಪುಸಿನೊ ಕಾಫಿ ದರ 200 ರೂ.ನಿಂದ 220 ರೂ.ಗೆ ಹೆಚ್ಚಳವಾಗಲಿದೆ. ಕೆಫೆಯು ಅರೇಬಿಕಾ ಕಾಫಿ ಬೀಜವನ್ನು ಬಳಸುತ್ತದೆ.
ಫಿಲ್ಟರ್ ಕಾಫಿ ದರವೂ ಏರಿಕೆ:ಬೆಂಗಳೂರಿನ ದರ್ಶಿನಿಗಳು ತಮ್ಮ ಫಿಲ್ಟರ್ ಕಾಫಿ ಬೆಲೆಯನ್ನು 2 ರಿಂದ 5 ರೂ.ಗಳಷ್ಟು ಹೆಚ್ಚಿಸಿವೆ. ಒಂದು ಕಾಫಿಗೆ ಈಗ 12 ರಿಂದ 35 ರೂ. ವರೆಗೆ ಇದೆ ಎಂದು ವರದಿ ತಿಳಿಸಿದೆ.
