Bigg Boss: ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿರುವ ಬಿಗ್ ಬಾಸ್ (Bigg Boss) ಕನ್ನಡ ಸೀಜನ್-12 ಕಾರ್ಯಕ್ರಮದಲ್ಲಿ, ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದರು. ಇದರಿಂದ ಬಿಗ್ ಬಾಸ್ ಮನೆ ಮತ್ತು ಶೋ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ (DK shivakumar) ಅವರ ಸೂಚನೆಯ ಮೇರೆಗೆ ಮತ್ತು ಜಾಲಿವುಡ್ ಸ್ಟುಡಿಯೋ ಆಡಳಿತ ಮಂಡಳಿಯು ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಭರವಸೆ ನೀಡಿದ ನಂತರ, ಸ್ಟುಡಿಯೋದ ಬೀಗವನ್ನು ತೆಗೆಯಲಾಗಿದೆ. ಇದರಿಂದಾಗಿ ಇಂದಿನಿಂದ ಬಿಗ್ ಬಾಸ್ ಕಾರ್ಯಕ್ರಮದ ಶೂಟಿಂಗ್ ಪುನರಾರಂಭವಾಗಿದೆ.
ಆದ್ರೆ ಈ ಬೆಳವಣಿಗೆಯು ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಮನಗರದ ಜಾಲಿವುಡ್ ಸ್ಟುಡಿಯೋ ಗೇಟ್ ಬಳಿ ಜಮಾಯಿಸಿದ ಕಸ್ತೂರಿ ಕರ್ನಾಟಕ (Karnataka)ಜನಪರ ವೇದಿಕೆಯ ಕಾರ್ಯಕರ್ತರು ಸರ್ಕಾರದ ಈ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ‘ರಾತ್ರೋರಾತ್ರಿ ಯಾವ ಆಧಾರದ ಮೇಲೆ ಬಿಗ್ ಬಾಸ್‌ಗೆ ಅನುಮತಿ ನೀಡಲಾಗಿದೆ?’ ಎಂದು ಅವರು ಪ್ರಶ್ನಿಸಿದ್ದಾರೆ. ಸ್ಟುಡಿಯೋ ಆಡಳಿತವು ಪರಿಸರ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪವಿದೆ, ಈ ಅನುಮತಿಯನ್ನು ಅಕ್ರಮವೆಂದು ಕರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
