Bihar Election : ಬಿಹಾರ ವಿಧಾನಸಭಾ ಚುನಾವಣೆ ಚಟುವಟಿಕೆಗಳು ಗರಿ ಗೆದರಿವೆ. ಈಗಾಗಲೇ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಟಿಕೆಟ್ ಹಂಚಿಕೆ ಮಾಡಿಕೊಂಡು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಪ್ರಚಾರ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಮೀಕ್ಷೆಗಳು ಕೂಡ ಕಣಕ್ಕಿಳಿದಿದ್ದು ಈ ಬಾರಿ ಬಿಹಾರ ಜನತೆ ಯಾರ ಕೈಹಿಡಿಯಲಿದ್ದಾರೆ ಎಂದು ವಿಶ್ಲೇಷಿಸಿವೆ. ಹಾಗಾದ್ರೆ ಬಿಹಾರದಲ್ಲಿ ಗೆಲುವು ಯಾರಿಗೆ?
ಬಿಹಾರದಲ್ಲಿ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಜೆಡಿಯುನ ಎನ್ ಡಿಎ ಮೈತ್ರಿಕೂಟ ಹಾಗೂ ವಿಪಕ್ಷ ಮಹಾಘಟಬಂಧನ್ ನಡುವೆ ನೇರ ಹಣಾಹಣಿ ನಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಮೀಕ್ಷೆಯ ಪ್ರಮುಖ ಅಂಶವೆಂದರೆ ಬಿಜೆಪಿ, ಜೆಡಿಯು, ಎಚ್ ಎಎಂ ಮೈತ್ರಿಕೂಟ ಎನ್ ಡಿಎ ಪಕ್ಷಗಳು ಒಟ್ಟಾರೆ ಶೇ.41.3ರಷ್ಟು ಮತಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ. ಅದೇ ರೀತಿ ಬಿಹಾರ ಚುನಾವಣೆಯಲ್ಲಿ ಶೇ.39.7ರಷ್ಟು ಜನರು ಮಹಾಘಟಬಂಧನ್ ಅನ್ನು ಆಯ್ಕೆ ಮಾಡುವ ಅಂಶ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಮತ್ತೊಂದೆಡೆ ಮಾಜಿ ಚುನಾವಣ ಕಾರ್ಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ನೂತನ ಪಕ್ಷ ಜನ್ ಸುರಾಜ್ ಅನ್ನು ಅಂದಾಜು ಶೇ.9ರಷ್ಟು ಮಂದಿ ಸಮೀಕ್ಷೆಯಲ್ಲಿ ಬೆಂಬಲಿಸಿದ್ದಾರೆ. ಅಲ್ಲದೇ ಶೇ.2.5ರಷ್ಟು ಜನರು ಬಹುಜನ್ ಸಮಾಜ ಪಕ್ಷ ಹಾಗೂ ಶೇ.17ರಷ್ಟು ಮಂದಿ ಅಸಾದುದ್ದೀನ್ ಒವೈಸಿಯ ಎಐಎಂಐಎಂ ಪಕ್ಷದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.
ನೂತನ ಸಮೀಕ್ಷೆ ಪ್ರಕಾರ, ಮತದಾರರಿಗೆ ಆರ್ಥಿಕ ನೆರವು, ಉದ್ಯೋಗದ ಭರವಸೆ ನೀಡಿದ್ದ ಪರಿಣಾಮ ಎನ್ ಡಿಎ ಶೇಖಡವಾರು ಸ್ವಲ್ಪ ಮುನ್ನಡೆ ಕಂಡಿರುವುದಾಗಿ ತಿಳಿಸಿದೆ.
